ಕೀವ್: ‘ಉಕ್ರೇನ್ ಮತ್ತು ರಷ್ಯಾ ನಡುವಿನ ಕದನದಲ್ಲಿ ರಷ್ಯಾವನ್ನು ಬೆಂಬಲಿಸಿ ಉತ್ತರ ಕೊರಿಯಾದ ಸೈನಿಕರು ಅದರ ಸೇನೆ ಸೇರಿದರೆ ಯುದ್ಧ ಉಲ್ಬಣಗೊಳ್ಳುವ ಸಾಧ್ಯತೆಯಿದೆ’ ಎಂದು ಫ್ರಾನ್ಸ್ ಎಚ್ಚರಿಸಿದೆ.
ಉಕ್ರೇನ್ ವಿದೇಶಾಂಗ ಸಚಿವರ ಜತೆ ಶನಿವಾರ ಕೀವ್‌ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫ್ರಾನ್ಸ್ ವಿದೇಶಾಂಗ ಸಚಿವ ಜಾನ್ ನೊಯೆಲ್ ಬರೊ, ‘ಇದು ಸಂಘರ್ಷವನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯುವ ಗಂಭೀರ ಸಮಸ್ಯೆಯಾಗಿದೆ. ಅಲ್ಲದೆ, ಈ ಬೆಳವಣಿಗೆಯು ರಷ್ಯಾವು ಯುದ್ಧದಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ’ ಎಂದಿದ್ದಾರೆ.
ಫ್ರಾನ್ಸ್ ವಿದೇಶಾಂಗ ಸಚಿವರು ಮೊದಲ ಬಾರಿ ಉಕ್ರೇನ್ ಪ್ರವಾಸ ಕೈಗೊಂಡಿದ್ದಾರೆ. ‘ನ್ಯಾಟೊ’ಗೆ ಉಕ್ರೇನ್ ಸೇರ್ಪಡೆ ಕುರಿತು ಮಾತನಾಡಿದ ಅವರು ‘ನ್ಯಾಟೊಗೆ ಸೇರಲು ಉಕ್ರೇನ್‌ಗೆ ಫ್ರಾನ್ಸ್ ಮುಕ್ತ ಆಹ್ವಾನ ನೀಡುತ್ತದೆ. ಆದರೆ ಈ ಬಗ್ಗೆ ಮಿತ್ರರಾಷ್ಟ್ರಗಳೊಂದಿಗೆ ಚರ್ಚಿಸಬೇಕಾಗುತ್ತದೆ’ ಎಂದರು.
ಉತ್ತರ ಕೊರಿಯಾದ 10,000 ಸೈನಿಕರು ಉಕ್ರೇನ್ ಮೇಲೆ ಯುದ್ಧ ಮಾಡಲು ರಷ್ಯಾ ಸೇನೆಯನ್ನು ಸೇರಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಶುಕ್ರವಾರ ಹೇಳಿದ್ದರು. ಆದರೆ ಇದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ‘ನ್ಯಾಟೊ’ ಸ್ಪಷ್ಟನೆ ನೀಡಿತ್ತು.
‘ಇಂತಹ ಬೆಳವಣಿಗೆಯಿಂದ ಉಂಟಾಗುವ ಅಪಾಯವು ದೊಡ್ಡಮಟ್ಟದಲ್ಲಿರುತ್ತದೆ. ಇದರಿಂದ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣ ಮತ್ತಷ್ಟು ಹೆಚ್ಚುವ ಅಪಾಯವಿದೆ’ ಎಂದು ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿ ಸೈಬಿಹಾ ಅವರು ಹೇಳಿದರು.
ಉಕ್ರೇನ್‌ನ ಗ್ರಾಮ ವಶಕ್ಕೆ (ಮಾಸ್ಕೊ ವರದಿ): ಪೂರ್ವ ಉಕ್ರೇನ್ ಪ್ರದೇಶದಲ್ಲಿರುವ ಜೊರ್ಯಾನೆ ಎಂಬ ಗ್ರಾಮವನ್ನು ತಾನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವುದಾಗಿ ರಷ್ಯಾ ಶನಿವಾರ ಹೇಳಿದೆ.
ಈ ಗ್ರಾಮವನ್ನು ವಶಪಡಿಸಿಕೊಂಡಿರುವುದು ಕುರಾಖೋವ್ ಕೈಗಾರಿಕಾ ಕೇಂದ್ರವನ್ನು ತಲುಪಲು ತನ್ನ ಸೇನೆಗೆ ಸಹಾಯವಾಗಲಿದೆ ಎಂದೂ ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.