ADVERTISEMENT

ರಫೇಲ್‌ ಯುದ್ಧವಿಮಾನ ಖರೀದಿ: ತನಿಖೆಗೆ ‘ಸುಪ್ರೀಂ’ನಲ್ಲಿ ಹೊಸದಾಗಿ ಅರ್ಜಿ

ರಫೇಲ್‌ ಯುದ್ಧವಿಮಾನ ಖರೀದಿಯಲ್ಲಿ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 14:30 IST
Last Updated 11 ಏಪ್ರಿಲ್ 2021, 14:30 IST
ರಫೇಲ್‌ ವಿಮಾನ
ರಫೇಲ್‌ ವಿಮಾನ    

ನವದೆಹಲಿ: ರಫೇಲ್‌ ಯುದ್ಧವಿಮಾನಗಳ ಖರೀದಿ ಕುರಿತಂತೆ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ.

ಈ ಯುದ್ಧ ವಿಮಾನಗಳನ್ನು ತಯಾರಿಸುವ ಕಂಪನಿ ದಾಸೊ ಏವಿಯೇಶನ್‌, ಭಾರತದಲ್ಲಿನ ಮಧ್ಯವರ್ತಿಗಳಿಗೆ ₹ 9 ಕೋಟಿ ಲಂಚ ನೀಡಿದೆ ಎಂಬುದಾಗಿ ಫ್ರಾನ್ಸ್‌ನ ಮಾಧ್ಯಮವೊಂದು ಇತ್ತೀಚೆಗೆ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸುವಂತೆ ಕೋರಿ ವಕೀಲ ಮನೋಹರಲಾಲ್‌ ಶರ್ಮಾ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಡಿಫ್‌ಸಿಸ್‌ ಸೊಲೂಷನ್ಸ್‌ ಪ್ರೈ. ಲಿ.ನ ಸುಶೇನ್‌ ಮೋಹನ್‌ ಗುಪ್ತಾ, ದಾಸೊ ರಿಲಯನ್ಸ್‌ ಏರೋಸ್ಪೇಸ್‌ ಲಿ. (ಡಿಆರ್‌ಎಎಲ್‌) ಅನ್ನು ಅವರು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ADVERTISEMENT

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 420 (ವಂಚನೆ), 120–ಬಿ (ಕ್ರಿಮಿನಲ್‌ ಪಿತೂರಿ) ಅಡಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸುವಂತೆ ಕೋರಿದ್ದಾರೆ.

ರಫೇಲ್‌ ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಗೆ ಆದೇಶಿಸುವಂತೆ ಕೋರಿ ಈ ಹಿಂದೆ ವಕೀಲ ಶರ್ಮಾ ಸೇರಿದಂತೆ ಹಲವರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಜಾಗೊಳಿಸಿ ಸುಪ್ರೀಂಕೋರ್ಟ್‌ 2018ರ ಡಿಸೆಂಬರ್‌ 14ರಂದು ತೀರ್ಪು ನೀಡಿತ್ತು.

ಈ ಅರ್ಜಿಗಳನ್ನು ವಜಾಗೊಳಿಸಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೆಲವರು ಪುನಃ ಅರ್ಜಿ ಸಲ್ಲಿಸಿದ್ದರು. ಅಂಥ ಅರ್ಜಿಗಳನ್ನು ಸಹ ತಿರಸ್ಕರಿಸಿ ಸುಪ್ರೀಂಕೋರ್ಟ್‌ 2019ರ ನವೆಂಬರ್‌ 14ರಂದು ತೀರ್ಪು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.