ಪೋರ್ಟ್–ಒ–ಪ್ರಿನ್ಸ್, ಹೈಟಿ: ಉತ್ತರ ಹೈಟಿಯಲ್ಲಿ ಮಂಗಳವಾರ ಗ್ಯಾಸೊಲಿನ್ ಸಾಗಿಸುತ್ತಿದ್ದ ಟ್ರಕ್‌ವೊಂದು ಸ್ಫೋಟಗೊಂಡು 60 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 9 ಸಾವಿರ ಗ್ಯಾಲನ್ ಇಂಧನವನ್ನು ಸಾಗಿಸುತ್ತಿದ್ದ ಟ್ರಕ್, ಕ್ಯಾಪ್-ಹೈಟಿಯನ್ ನಗರದ ವಸತಿ ಪ್ರದೇಶದಲ್ಲಿ ಉರುಳಿಬಿದ್ದಿದೆ. ಮಧ್ಯರಾತ್ರಿಯ ಸುಮಾರಿಗೆ ಟ್ರಕ್ ಸ್ಫೋಟಗೊಳ್ಳುವ ಮುನ್ನ ಅದರಲ್ಲಿರುವ ಗ್ಯಾಸೊಲಿನ್ ಅನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ, ಟ್ರಕ್ ಸ್ಫೋಟಗೊಂಡು ಅಲ್ಲಿಂದ 300 ಅಡಿ ವ್ಯಾಪ್ತಿಯಲ್ಲಿರುವ ಎಲ್ಲವನ್ನೂ ಸುಟ್ಟುಹಾಕಿತು ಎಂದು ಉತ್ತರ ಹೈಟಿಯ ಅಗ್ನಿಶಾಮಕ ದಳದ ಮುಖ್ಯಸ್ಥ ಫ್ರಾಂಡಿ ಜೀನ್ ತಿಳಿಸಿದರು.
'ನಾನು ಅಗ್ನಿಶಾಮಕ ದಳಕ್ಕೆ ಸೇರಿದ 17 ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಭೀಕರ ಅವಘಡವನ್ನು ಕಂಡಿದ್ದೇನೆ. ಈ ದುರಂತದಲ್ಲಿ ನಾನು ಬದುಕುಳಿದಿರುವುದೇ ಹೆಚ್ಚು' ಎಂದು 49 ವರ್ಷದ ಜೀನ್ ತಿಳಿಸಿದ್ದಾರೆ.
ಜುಲೈನಲ್ಲಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಹತ್ಯೆಯಿಂದ ತತ್ತರಿಸಿದ್ದ ದೇಶವು ಸುಧಾರಿಸಿಕೊಳ್ಳುತ್ತಿರುವಾಗಲೇ ಈ ವರ್ಷ ಹೈಟಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಇದಕ್ಕೂ ಮುನ್ನ ಕೆರಿಬಿಯನ್ ರಾಷ್ಟ್ರವು ಮಾರಣಾಂತಿಕ ಭೂಕಂಪ, ತೀವ್ರ ಪ್ರವಾಹ ಮತ್ತು ದೇಶದಲ್ಲಿ ಶಕ್ತಿಶಾಲಿ ಕ್ರಿಮಿನಲ್ ಗ್ಯಾಂಗ್‌ಗಳಿಂದ ಹೆಚ್ಚುತ್ತಿರುವ ಅಪಹರಣ ಪ್ರಕರಣಗಳಿಂದ ತತ್ತರಿಸಿ ಹೋಗಿತ್ತು.
ಹೈಟಿಯ ಎಲೆಕ್ಟ್ರಿಕಲ್ ಗ್ರಿಡ್‌ಗಳು ಈಗ ನಂಬಲಾಗದ ಸ್ಥಿತಿಯಲ್ಲಿವೆ. ಬ್ಯಾಂಕ್‌ಗಳು, ಆಸ್ಪತ್ರೆಗಳು ಮತ್ತು ಇತರೆ ಉದ್ಯಮಗಳನ್ನು ಒಳಗೊಂಡಂತೆ ದೇಶದ ಹೆಚ್ಚಿನ ವ್ಯವಹಾರಗಳು ವಿದ್ಯುತ್‌ಗಾಗಿ ಜನರೇಟರ್‌ಗಳನ್ನು ಅವಲಂಬಿಸಿದೆ. ಆದರೆ, ಕ್ರಿಮಿನಲ್ ಗ್ಯಾಂಗ್‌ಗಳು ಇಂಧನ ಟರ್ಮಿನಲ್‌ಗಳಿಗೆ ಪ್ರವೇಶವನ್ನು ನಿಯಂತ್ರಿಸಿದ್ದು, ಕಳೆದ ಕೆಲವು ತಿಂಗಳಿನಿಂದ ವಿತರಣೆಯನ್ನು ನಿರ್ಬಂಧಿಸಿವೆ. ಹೀಗಾಗಿ ಹೈಟಿಯನ್ನರು ತೀವ್ರ ಇಂಧನದ ಕೊರತೆಯನ್ನು ಎದುರಿಸುತ್ತಿದ್ದಾರೆ.
ಇಂಧನದ ಅಭಾವದಿಂದಲೇ ಕ್ಯಾಪ್-ಹೈಟಿಯ ಕೆಲವು ಜನರು ಉರುಳಿದ್ದ ಟ್ರಕ್‌ನಿಂದ ಗ್ಯಾಸ್ ಅನ್ನು ಸಂಗ್ರಹಿಸಲು ಮುಂದಾಗಿದ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಸ್ಫೋಟದಲ್ಲಿ ನೂರಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಮೇಯರ್ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ. ಮೇಯರ್ ಯವ್ರೋಸ್ ಪಿಯರ್, ನಮ್ಮ ನಗರದಲ್ಲಿ ಉಂಟಾದ ಅವಘಡದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಏರಿಯಲ್ ಹೆನ್ರಿ ಟ್ವೀಟ್ ಮಾಡಿದ್ದು, ಘಟನೆ ನಡೆದ ಸ್ಥಳಕ್ಕೆ ವೈದ್ಯಕೀಯ ತಂಡ ತೆರಳಿದೆ. ಈ ಘಟನೆಯಿಂದಾಗಿ ಆಘಾತ ಉಂಟಾಗಿದೆ ಎಂದಿದ್ದು, ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಕ್ಯಾಪ್-ಹೈಟಿನ್‌ಗೆ ತೆರಳಿದ ಅವರು ಘಟನೆಯಲ್ಲಿ ಸಾವಿಗೀಡಾದ ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.