ಟೋಕಿಯೊ: ಜಪಾನ್ ಈಶಾನ್ಯ ಭಾಗದ ಫುಕುಶಿಮಾದಲ್ಲಿ ಭೂಕಂಪ, ಸುನಾಮಿ ಹಾಗೂ ಅದರಿಂದ ಪರಮಾಣು ಸ್ಥಾವರ ದುರಂತ ಸಂಭವಿಸಿ ಹತ್ತು ವರ್ಷಗಳು ಕಳೆದಿದ್ದು, ದುರಂತದಲ್ಲಿಮಡಿದವರಿಗೆ ಅವರ ಕುಟುಂಬದವರು ಗುರುವಾರ ಪುಷ್ಪ ನಮನ ಸಲ್ಲಿಸಿದರು.
ಸುನಾಮಿಯಿಂದ ಮೃತಪಟ್ಟವರಿಗೆ ಪುಷ್ಪ ನಮನ ಸಲ್ಲಿಸಲು ಮೃತರ ಸಂಬಂಧಿಕರು ಪುಷ್ಪಗುಚ್ಚ ಗಳೊಂದಿಗೆ ಸಮುದ್ರದತ್ತ ತೆರಳಿದರು. ಜಪಾನ್ ರಾಜ ನರುಹಿಟೊ ಮತ್ತು ಪ್ರಧಾನಿ ಯೋಶಿಹಿಡೆ ಸುಗಾ ಅವರು ಗುರುವಾರ ಈ ದುರಂತದಲ್ಲಿ ಮೃತಪಟ್ಟವರಿಗಾಗಿ ನಿರ್ಮಿಸಿರುವ ಸ್ಮಾರಕ ಸ್ಥಳಕ್ಕೆ ತೆರಳಿ ಹೂಗುಚ್ಚವಿರಿಸಿ ಮೌನ ಆಚರಿಸಿದರು.
ಜಪಾನ್‌ನ ಈಶಾನ್ಯ ಭಾಗದಲ್ಲಿ ಮಾರ್ಚ್ 11, 2011 ರಂದು ಸಂಭವಿಸಿದ 9.0 ತೀವ್ರತೆಯ ಭೂಕಂಪ ಮತ್ತು ಸುನಾಮಿಯಿಂದಾಗಿ ನೂರಾರು ನಗರ, ಪಟ್ಟಣಗಳು ನಾಶವಾದವು. ಈ ಘಟನೆಯಲ್ಲಿ ಫುಕುಶಿಮಾ ಡೈಚಿ ಪರಮಾಣು ಸ್ಥಾವರಕ್ಕೂ ಹಾನಿ ಉಂಟಾಗಿ, ಘಟಕದಿಂದ ವಿಕಿರಣ ಸೋರಿಕೆಯಾಯಿತು. ಈ ದುರಂತದಲ್ಲಿ18,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಪರಿಣಾಮವಾಗಿ ಘಟಕದ ಸಮೀಪದಲ್ಲಿದ್ದ ಪ್ರದೇಶಗಳಿಂದ 50 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು.
ಅಂದು ಫುಕುಶಿಮಾದಿಂದಸ್ಥಳಾಂತರಗೊಂಡಿರುವ ಲಕ್ಷಾಂತರ ಮಂದಿಯಲ್ಲಿ, ಇನ್ನೂ 40 ಸಾವಿರ ಮಂದಿ ಹತ್ತು ವರ್ಷಗಳ ನಂತರವೂ ತಮ್ಮ ಮೂಲ ಪ್ರದೇಶಗಳಿಗೆ ವಾಪಸಾಗಿಲ್ಲ. ಪರಮಾಣು ಘಟಕಕ್ಕೆ ಹಾನಿಯಾಗಿ, ಅದರಿಂದ ವಿಕಿರಣಗಳು ಹೊರ ಹೊಮ್ಮಿ ಅಂದು ಮಲಿನಗೊಂಡಿರುವ ಸುತ್ತಲಿನ ಪ್ರದೇಶಗಳು ಇನ್ನೂ ಸುಧಾರಿಸಿಲ್ಲದ ಕಾರಣ ಈ ಮಂದಿ ಇನ್ನೂ ತಮ್ಮ ಮೂಲ ಮನೆಗಳಿಂದ ದೂರವೇ ಉಳಿಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.