ADVERTISEMENT

ಐಮೆಕ್ ಯೋಜನೆಗೆ ಬದ್ಧತೆ ವ್ಯಕ್ತಪಡಿಸಿದ ಜಿ7

ಜಿ–7 ದೇಶಗಳ ಶೃಂಗದಲ್ಲಿ ಭಾಗಿಯಾದ ಪೋಪ್ ಫ್ರಾನ್ಸಿಸ್

ಪಿಟಿಐ
Published 15 ಜೂನ್ 2024, 16:07 IST
Last Updated 15 ಜೂನ್ 2024, 16:07 IST
<div class="paragraphs"><p>ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪೋಪ್ ಫ್ರಾನ್ಸಿಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕೈಹಿಡಿದರು ಸಾಗಿದರು. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ, ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಇದ್ದಾರೆ</p></div>

ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪೋಪ್ ಫ್ರಾನ್ಸಿಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕೈಹಿಡಿದರು ಸಾಗಿದರು. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ, ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಇದ್ದಾರೆ

   

ಪಿಟಿಐ ಚಿತ್ರ

ಬಾರಿ (ಇಟಲಿ): ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್ (ಐಮೆಕ್) ಒಳಗೊಂಡಂತೆ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡಲು ಜಿ–7 ದೇಶಗಳ ಪ್ರಮುಖರು ಬದ್ಧತೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಶೃಂಗಸಭೆಯ ಆತಿಥ್ಯ ವಹಿಸಿದ್ದ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಜಿ–7 ದೇಶಗಳ ಶೃಂಗಸಭೆಯ ಕೊನೆಯಲ್ಲಿ, ಶುಕ್ರವಾರ ಹೊರಡಿಸಿರುವ ಹೇಳಿಕೆಯಲ್ಲಿ ಈ ಯೋಜನೆಯ ಬಗ್ಗೆ ಉಲ್ಲೇಖವಿದೆ. ಇಂಡೊ–ಪೆಸಿಫಿಕ್ ಪ್ರದೇಶವನ್ನು ನಿಯಮಗಳಿಗೆ ಅನುಗುಣವಾಗಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಇರಿಸುವುದಕ್ಕೆ ಕೂಡ ಈ ದೇಶಗಳ ಮುಖಂಡರು ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಐಮೆಕ್ ಯೋಜನೆಯು ಸೌದಿ ಅರೇಬಿಯಾ, ಭಾರತ, ಅಮೆರಿಕ ಮತ್ತು ಯುರೋಪಿನ ನಡುವೆ ಬೃಹತ್ತಾದ ರೈಲು, ರಸ್ತೆ ಮತ್ತು ಹಡಗು ಮಾರ್ಗವನ್ನು ರೂಪಿಸುವ ಆಲೋಚನೆ ಹೊಂದಿದೆ. ಈ ಮೂಲಕ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಪಶ್ಚಿಮದ ದೇಶಗಳನ್ನು ಬೆಸೆಯುವುದು ಯೋಜನೆಯ ಉದ್ದೇಶ.

ಚೀನಾ ಆರಂಭಿಸಿರುವ ಬೆಲ್ಟ್ ಆ್ಯಂಡ್ ರೋಡ್ (ಬಿಆರ್‌ಐ) ಯೋಜನೆಗೆ ಎದುರಾಗಿ, ಪ್ರಭಾವಿ ಯೋಜನೆಯೊಂದನ್ನು ರೂಪಿಸಲು ಸಮಾನ ಮನಸ್ಕ ದೇಶಗಳ ಉಪಕ್ರಮವನ್ನಾಗಿಯೂ ಐಮೆಕ್ ಯೋಜನೆಯನ್ನು ಗುರುತಿಸಲಾಗಿದೆ. ಬಿಆರ್‌ಐ ಯೋಜನೆಯಲ್ಲಿನ ಪಾರದರ್ಶಕತೆಯ ಕೊರತೆ ಹಾಗೂ ಕೆಲವು ದೇಶಗಳ ಸಾರ್ವಭೌಮತ್ವಕ್ಕೆ ಗೌರವ ಕೊಡದೆ ಇರುವುದಕ್ಕಾಗಿ ಆ ಯೋಜನೆಯ ಬಗ್ಗೆ ಟೀಕೆಗಳು ಇವೆ.

ಐಮೆಕ್‌ನ ರೂಪುರೇಷೆಗಳನ್ನು ನವದೆಹಲಿಯಲ್ಲಿ ಕಳದ ವರ್ಷ ನಡೆದ ಜಿ–20 ದೇಶಗಳ ಶೃಂಗಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲ ನೀಡುವುದಾಗಿಯೂ ಜಿ–7 ದೇಶಗಳು ಹೇಳಿವೆ.

ವರ್ಷದ ಅಂತ್ಯದ ವೇಳೆಗೆ ಉಕ್ರೇನ್‌ಗೆ ಅಂದಾಜು 50 ಬಿಲಿಯನ್ ಡಾಲರ್ (₹4.17 ಲಕ್ಷ ಕೋಟಿ) ನೆರವು ಸಿಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಈ ದೇಶಗಳು ಹೇಳಿವೆ. ಜಿ–7 ಶೃಂಗದಲ್ಲಿ ಪೋಪ್‌ ಫ್ರಾನ್ಸಿಸ್ ಅವರು ಭಾಗಿಯಾಗಿದ್ದರು. ಈ ಶೃಂಗದಲ್ಲಿ ಪಾಲ್ಗೊಂಡ ಮೊದಲ ಧರ್ಮಗುರು ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.