ADVERTISEMENT

G7 ಶೃಂಗ: ಕೈಮುಗಿದು ಸ್ವಾಗತಿಸಿದ PM ಮೆಲೋನಿ; ಪ್ರಮುಖ ನಾಯಕರ ಭೇಟಿಯಾದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2024, 11:25 IST
Last Updated 14 ಜೂನ್ 2024, 11:25 IST
<div class="paragraphs"><p>ಜರ್ಮನ್ ಚಾನ್ಸಲರ್‌&nbsp;ಒಲಾಫ್‌ ಸ್ಕಾಲ್ಜ್‌ ಅವರನ್ನು ಕೈಮುಗಿದ ಸ್ವಾಗತಿಸಿದ ಜಾರ್ಜಿಯಾ ಮೆಲೊನಿ</p></div>

ಜರ್ಮನ್ ಚಾನ್ಸಲರ್‌ ಒಲಾಫ್‌ ಸ್ಕಾಲ್ಜ್‌ ಅವರನ್ನು ಕೈಮುಗಿದ ಸ್ವಾಗತಿಸಿದ ಜಾರ್ಜಿಯಾ ಮೆಲೊನಿ

   

ಎಕ್ಸ್ ಚಿತ್ರ

ನವದೆಹಲಿ: ಈ ಬಾರಿಯ ಜಿ7 ರಾಷ್ಟ್ರಗಳ ಶೃಂಗಸಭೆಯನ್ನು ಆಯೋಜಿಸಿರುವ ಇಟಲಿಗೆ ಆಗಮಿಸಿದ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರನ್ನು ‘ನಮಸ್ತೆ’ ಮಾಡುವ ಮೂಲಕ ಪ್ರಧಾನಿ ಜಾರ್ಜಿಯಾ ಮೆಲೊನಿ ಸ್ವಾಗತಿಸಿದ್ದಾರೆ. ಅವರ ಪರಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ADVERTISEMENT

ಇಟಲಿಯ ದಕ್ಷಿಣ ಭಾಗದಲ್ಲಿರುವ ಅಪುಲಿಯಾ ನಗರದಲ್ಲಿನ ಬೋರ್ಗೊ ಎಗ್ನಾಝಿಯಾ ರೆಸಾರ್ಟ್‌ನಲ್ಲಿ ಜೂನ್ 13ರಿಂದ 15ರವರೆಗೆ ಆಯೋಜನೆಗೊಂಡಿರುವ ಜಿ7 ಶೃಂಗದಲ್ಲಿ ಭಾಗವಹಿಸಿದ ಪ್ರಮುಖ ನಾಯಕರಿಗೆ ನಮಸ್ತೆ ಮೂಲಕ ಮೆಲೊನಿ ಸ್ವಾಗತಿಸಿದ್ದಾರೆ. ಈ ಕುರಿತ ಬಹಳಷ್ಟು ವಿಡಿಯೊಗಳು ಎಕ್ಸ್ ವೇದಿಕೆಯಲ್ಲಿ ಹರಿದಾಡುತ್ತಿವೆ. ಇವುಗಳಿಗೆ ಹಲವರು ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಜರ್ಮನಿಯ ಚಾನ್ಸಲರ್ ಒಲಾಫ್‌ ಸ್ಕಾಲ್ಜ್‌, ಯುರೋಪ್‌ನ ಕಮಿಷನ್‌ ಪ್ರೆಸಿಡೆಂಟ್ ಅರ್ಸಲಾ ವಾನ್ ಡೆರ್‌ ಲಿಯಾನ್‌ ಅವರನ್ನು ಕೈಮುಗಿದು ಸ್ವಾಗತಿಸಿದ ಮೆಲೊನಿ ವಿಡಿಯೊಗಳು ಹರಿದಾಡಿವೆ.

ಜಿ7 ಶೃಂಗದಲ್ಲಿ ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್, ಬ್ರಿಟಲ್‌ ಮತ್ತು ಅಮೆರಿಕ ಪಾಲ್ಗೊಂಡಿವೆ. ಇವರೊಂದಿಗೆ ಐರೋಪ್ಯ ಒಕ್ಕೂಟದ ಪರವಾಗಿ ಯುರೋಪಿಯನ್ ಕಮಿಷನ್‌ ಭಾವಹಿಸಿದ್ದಾರೆ. 

ಜಿ7 ರಾಷ್ಟ್ರಗಳ ಗುಂಪಿಗೆ ಸೇರದಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಶೃಂಗಕ್ಕೆ ಆಹ್ವಾನಿಸಲಾಗಿದೆ. ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರದ ಮೊದಲ ವಿದೇಶ ಭೇಟಿ ಇದಾಗಿದೆ. ಇವರೊಂದಿಗೆ ಉಕ್ರೇನ್,ಬ್ರಜಿಲ್, ಅರ್ಜೆಂಟೀನಾ, ಟರ್ಕಿ, ಯುಎಇ, ಕೀನ್ಯಾ, ಅಲ್ಜೀರಿಯಾ, ಟುನಿಷಿಯಾ ಹಾಗೂ ಮಾರಿಷಸ್‌ ರಾಷ್ಟ್ರಗಳ ಪ್ರಮುಖರು ಇದರಲ್ಲಿ ಪಾಲ್ಗೊಂಡಿದ್ದಾರೆ.

ವಿಶ್ವದ ಪ್ರಮುಖ ನಾಯಕರ ಭೇಟಿ

ಜಿ7 ಶೃಂಗದಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. 

ತಮ್ಮ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಸೇನೆ, ಪರಮಾಣು, ಭಾಹ್ಯಾಕಾಶ, ಶಿಕ್ಷಣ, ಹವಾಮಾನ ಬದಲಾವಣೆ, ಸಾರ್ವಜನಿಕರಿಗೆ ಡಿಜಿಟಲ್ ಮೂಲಸೌಕರ್ಯ, ಕ್ಲಿಷ್ಟಕರ ತಂತ್ರಜ್ಞಾನ, ಸಂಪರ್ಕ ಹಾಗೂ ಸಂಸ್ಕೃತಿ ವಿಷಯ ಕುರಿತು ಚರ್ಚಿಸಿದ್ದಾರೆ ಎಂದೆನ್ನಲಾಗಿದೆ. ಇದರೊಂದಿಗೆ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತೂ ಅವರು ಚರ್ಚಿಸಿದ್ದಾರೆ ಎಂದೆನ್ನಲಾಗಿದೆ.

ಇವರೊಂದಿಗೆ ಪೋಪ್ ಹಾಗೂ ಇಟಲಿ ಪ್ರಧಾನಿ ಮೆಲೊನಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.