ADVERTISEMENT

ಅಕ್ತರ್ ಹೇಳಿಕೆಯಿಂದ ಪಾಕಿಸ್ತಾನದ ನಿಜಬಣ್ಣ ಬಯಲಾಗಿದೆ: ಗೌತಮ್ ಗಂಭೀರ್

ಪಿಟಿಐ
Published 27 ಡಿಸೆಂಬರ್ 2019, 14:54 IST
Last Updated 27 ಡಿಸೆಂಬರ್ 2019, 14:54 IST
   

ನವದೆಹಲಿ: ‘ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಹಿಂದೂವಾಗಿದ್ದರು ಎಂಬ ಕಾರಣಕ್ಕೆ ಉಳಿದ ಆಟಗಾರರು ಕಡೆಗಣಿಸುತ್ತಿದ್ದರು ಎಂಬ ಹಿರಿಯ ಕ್ರಿಕೆಟಿಗ ಶೋಯೆಬ್ ಅಕ್ತರ್ ಅವರ ಹೇಳಿಕೆ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡಿದೆ’ ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

‘ಮೊಹಮ್ಮದ್ ಅಜರುದ್ದೀನ್ ಅವರಂಥ ಆಟಗಾರರು ನಮ್ಮಲ್ಲಿದ್ದರು. ಅಜರುದ್ದೀನ್‌ಗೆ ಅನೇಕ ವರ್ಷ ಭಾರತ ತಂಡದ ನಾಯಕತ್ವವನ್ನು ವಹಿಸಲಾಗಿತ್ತು. ಆದರೆ ಸ್ವತಃ ಕ್ರಿಕೆಟರ್ ಆಗಿರುವ ಇಮ್ರಾನ್ ಖಾನ್ ಪ್ರಧಾನಿಯಾಗಿರುವ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಈಗ ಗೊತ್ತಾಗಿದೆ’ ಎಂದು ಗಂಭೀರ್ ಟೀಕಿಸಿದ್ದಾರೆ.

‘ಪಾಕಿಸ್ತಾನಕ್ಕಾಗಿ ಕನೇರಿಯಾ ಅನೇಕ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೂ ಅವರ ಮೇಲೆ ದೌರ್ಜನ್ಯ ನಡೆಯುತ್ತಿತ್ತು ಎಂಬುದು ನಾಚಿಕೆಗೇಡಿನ ವಿಷಯ. ಭಾರತದಲ್ಲಿ ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್‌, ಮುನಾಫ್ ಪಟೇಲ್ ಮುಂತಾದವರು ಗೌರವದಿಂದ ಆಡಿದ್ದಾರೆ. ಪಟೇಲ್ ಮತ್ತು ನಾನು ಗೆಳೆಯರಾಗಿದ್ದೆವು. ದೇಶಕ್ಕಾಗಿ ಇಬ್ಬರೂ ಅತ್ಯುತ್ಸಾಹದಿಂದ ಆಡಿದ್ದೇವೆ’ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಗಂಭೀರ್ ಹೇಳಿದ್ದಾರೆ.

ADVERTISEMENT

ಕನೇರಿಯಾ, ಪಾಕಿಸ್ತಾನ ತಂಡದಲ್ಲಿ ಆಡಿದ್ದ ಎರಡನೇ ಹಿಂದೂ ಆಗಿದ್ದರು. ಅವರ ಮಾವ ಅನಿಲ್ ದಾಲ್‌ಪಟ್ ಪಾಕಿಸ್ತಾನ ತಂಡದಲ್ಲಿದ್ದರು. 61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್ ಕಬಳಿಸಿದ್ದ ಕನೇರಿಯಾ 18 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.