ವಾಷಿಂಗ್ಟನ್ (ಪಿಟಿಐ): ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಗೆ ಅಮೆರಿಕದ ಗಾಂಧಿ ಪ್ರತಿಷ್ಠಾನವು ಪ್ರತಿಷ್ಠಿತ ‘ಗಾಂಧಿ ಪೀಸ್ ಪಿಲಿಗ್ರಿಮ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅಟ್ಲಾಂಟಾದಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಸೋದರಳಿಯ ಐಸಾಕ್ ಫಾರಿಸ್ ಅವರು ಈ ಪ್ರಶಸ್ತಿಯನ್ನು ಗುರೂಜಿ ಅವರಿಗೆ ಪ್ರದಾನ ಮಾಡಿದರು. ಈ ವೇಳೆ ಭಾರತದ ಕಾನ್ಸುಲ್ ಜನರಲ್ ಡಾ. ಸ್ವಾತಿ ಕುಲಕರ್ಣಿ ಉಪಸ್ಥಿತರಿದ್ದರು.
‘ಗುರೂಜಿ ಅವರ ಮಹೋನ್ನತ ಸೇವೆ ಮತ್ತು ಮಾನವೀಯತೆಯ ಆಧಾರದ ಮೇಲೆ ಜಾಗತಿಕವಾಗಿ ಬದಲಾವಣೆ ತರಲು ಅವರು ಶ್ರಮಿಸುತ್ತಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರು ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದರು. ಈ ಇಬ್ಬರು ನಾಯಕರಿಂದ ಸ್ಪೂರ್ತಿ ಪಡೆದಿರುವ ಗುರೂಜಿ ಅವರು ಜಾಗತಿಕ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಶ್ರೀ ರವಿಶಂಕರ ಗುರೂಜಿ, ‘ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರ ಸಂದೇಶಗಳು ಇಂದಿಗೂ ಪ್ರಸ್ತುತ. ಪ್ರತಿ ಪೀಳಿಗೆ ಮತ್ತು ವಯೋಮಾನದವರಿಗೆ ಈ ಇಬ್ಬರ ವಿಚಾರಗಳು ಹೊಸತಾಗಿರುತ್ತವೆ. ಕೆಲ ಸಂದರ್ಭಗಳಲ್ಲಿಯಂತೂ ಅವರ ಸಂದೇಶಗಳು ಅತ್ಯಂತ ಹೆಚ್ಚು ಪ್ರಸ್ತುತವಾಗಿರುತ್ತವೆ. ಧ್ರುವೀಕರಣ ಮತ್ತು ಉಧ್ವಿಗ್ನತೆಯನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ಶಾಂತಿಯ ಸಂದೇಶಗಳನ್ನು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಹೇಳಬೇಕಿದೆ’ ಎಂದು ಹೇಳಿದರು.
ಜಾಗತಿಕ ಶಾಂತಿಗಾಗಿ ಗುರೂಜಿ ಅವರು ‘ಐ ಸ್ಟ್ಯಾಂಡ್ ಫಾರ್ ಪೀಸ್’ ಅಭಿಯಾನ ಹಮ್ಮಿಕೊಂಡಿದ್ದು, ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಅಭಿಯಾನದ ಭಾಗವಾಗಿ ಅವರು ನ್ಯೂಜರ್ಸಿ, ವರ್ಜೀನಿಯಾ ಬೀಚ್, ಮೆಂಫಿಸ್‌ನಲ್ಲಿ ಹಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಗುರೂಜಿ ಅವರ ಈ ಅಭಿಯಾನವು ಮುಂದಿನ ವರ್ಷ ವಾಷಿಂಗ್ಟನ್‌ನ ನ್ಯಾಷನಲ್ ಮಾಲ್‌ನಲ್ಲಿ ಜರುಗಲಿದೆ. ಇದೇ ಸ್ಥಳದಲ್ಲಿ 60 ವರ್ಷಗಳ ಹಿಂದೆ ಡಾ. ಮಾರ್ಟಿನ್ ಲೂಥರ್ ಕಿಂಗ್ ಅವರು ತಮ್ಮ ಪ್ರಸಿದ್ಧ ‘ಐ ಡ್ರೀಮ್’ ಭಾಷಣ ಮಾಡಿದ್ದರು ಎಂದು ಆರ್ಟ್ ಆಫ್ ಲಿವಿಂಗ್‌ನ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.