ADVERTISEMENT

ಗಾಜಾ | ನೆಮ್ಮದಿ ಕಸಿದ ಒಂದು ವರ್ಷ: ಅವಶೇಷಗಳ ಬೀಡಾದ ಗಾಜಾಪಟ್ಟಿ

* ಭೀಕರತೆಗೆ ಸಾಕ್ಷಿಯಾಗುಳಿದ ಸೇನಾ ಪರಿಕರಗಳು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 14:24 IST
Last Updated 7 ಅಕ್ಟೋಬರ್ 2024, 14:24 IST
<div class="paragraphs"><p>ಗಾಜಾ ಪಟ್ಟಿಯ ದಕ್ಷಿಣ ಭಾಗವನ್ನು ತೆರವುಗೊಳಿಸಬೇಕು ಎಂಬ ಇಸ್ರೇಲ್‌ ಸೇನೆಯ ಸೂಚನೆಯಿಂದಾಗಿ ಸೋಮವಾರ ಸಾವಿರಾರು ನಿರಾಶ್ರಿತ ಪ್ಯಾಲೆಸ್ಟೀನಿಯರು ಖಾನ್‌ ಯೂನಿಸ್ ನಗರಕ್ಕೆ ಗುಳೆ ಬಂದರು.</p></div>

ಗಾಜಾ ಪಟ್ಟಿಯ ದಕ್ಷಿಣ ಭಾಗವನ್ನು ತೆರವುಗೊಳಿಸಬೇಕು ಎಂಬ ಇಸ್ರೇಲ್‌ ಸೇನೆಯ ಸೂಚನೆಯಿಂದಾಗಿ ಸೋಮವಾರ ಸಾವಿರಾರು ನಿರಾಶ್ರಿತ ಪ್ಯಾಲೆಸ್ಟೀನಿಯರು ಖಾನ್‌ ಯೂನಿಸ್ ನಗರಕ್ಕೆ ಗುಳೆ ಬಂದರು.

   

ಗಾಜಾ ಪಟ್ಟಿ: ಈಗ ಇದು ಅವಶೇಷಗಳ ಬೀಡು. ಇಸ್ರೇಲ್‌ನ ಸೇನೆಯ ನಿರಂತರ ದಾಳಿಯಿಂದ ನಲುಗಿಹೋಗಿದೆ. ಕಟ್ಟಡ ಅವಶೇಷಗಳ ರಾಶಿ. ಸಾಂಕ್ರಾಮಿಕ ಭೀತಿ ಮೂಡಿಸಿರುವ, ನಿಂತ ಕಲುಷಿತ ನೀರು. ವಾತಾವರಣವನ್ನು ಆವರಿಸಿರುವ, ಇನ್ನೂ ಪೂರ್ಣ ತೆರವಾಗದ, ಕೊಳೆತ ಶವಗಳಿಂದ ಹೊರಹೊಮ್ಮುವ ದುರ್ವಾಸನೆ. ಈ ಎಲ್ಲದಕ್ಕೂ ಸಾಕ್ಷಿಯಾಗಿ ಅಲ್ಲಲ್ಲಿ ನಿಂತಿರುವ ಫಿರಂಗಿಗಳು.

ಇದು, ಗಾಜಾಪಟ್ಟಿ. ಲಕ್ಷಾಂತರ ಪ್ಯಾಲೆಸ್ಟೀನಿಯರ ನೆಲೆ. ಇದೇ ಗಾಜಾಪಟ್ಟಿಯಲ್ಲಿದ್ದ ಹಮಾಸ್‌ ಬಂಡುಕೋರರು 2023ರ ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ನಡೆಸಿದ ಅಪ್ರಚೋದಿತ ದಾಳಿಯ ಒಂದು ವರ್ಷದಲ್ಲಿ ಆಗಿರುವ, ಜನರ ನೆಮ್ಮದಿ ಕಸಿದಿರುವ ‘ಬದಲಾವಣೆ’ 

ADVERTISEMENT

ಇಸ್ರೇಲ್‌ ಮೇಲೆ ಹಮಾಸ್ ಬಂಡುಕೋರರು ಅಪ್ರಚೋದಿತ ದಾಳಿಯ ಹಿಂದೆಯೇ ಪ್ರತಿಯಾಗಿ ಇಸ್ರೇಲ್‌ ಸೇನೆ ಗಾಜಾಪಟ್ಟಿಯ ಮೇಲೆ ನಿರಂತರ ದಾಳಿ ನಡೆಸಿದೆ. ದಾಳಿಯ ಕಿಚ್ಚು ವರ್ಷದ ನಂತರವೂ ಆರಿಲ್ಲ.

ರಕ್ಷಣಾತ್ಮಕ ಕ್ರಮವಾಗಿ ಇಸ್ರೇಲ್‌ ಸೇನೆ ನಡೆಸಿದ ದಾಳಿಯನ್ನು ಇತ್ತೀಚಿನ ಇತಿಹಾಸದಲ್ಲಿಯೇ ಭಯಂಕರ ಮತ್ತು ಅತಿ ವಿಧ್ವಂಸಕವಾದ ದಾಳಿ ಎನ್ನಲಾಗಿದೆ. ಕಳೆದ ಒಂದು ವರ್ಷದಲ್ಲಿ ಅಸುನೀಗಿದವರ ಅಧಿಕೃತ ಸಂಖ್ಯೆಯೇ 41,000. ಇವರಲ್ಲಿ ಮಕ್ಕಳು, ಮಹಿಳೆಯರೇ ಅಧಿಕ.

ಲಕ್ಷಾಂತರ ಕುಟುಂಬಗಳು ಮನೆ ತೊರೆದು ವಲಸೆ ಹೋಗಿವೆ. ವಾಪಸು ಗೂಡು ಸೇರಿಸಿಕೊಳ್ಳುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಸಂಘರ್ಷ ನಿಲ್ಲುವ ಸೂಚನೆ ಸದ್ಯ ಕಾಣುತ್ತಿಲ್ಲ. ಗತಸ್ಥಿತಿ ಮರಳಲು ಎಷ್ಟು ವರ್ಷ ಬೇಕು ಎಂಬುದು ಅಂದಾಜಿಗೆ ನಿಲುಕದ ವಿಷಯ.

ಸೇನೆ ತುಕಡಿಗಳು ಇನ್ನೂ ಈ ವಲಯಲ್ಲಿ ಬೀಡು ಬಿಟ್ಟಿದ್ದು, ಲಕ್ಷಾಂತರ ಜನರು ನಿರಾಶ್ರಿತರ ಶಿಬಿರಗಳಲ್ಲಿಯೇ ದಿನ ಕಳೆಯಬೇಕಾಗಿದೆ. ಪರಿಣಿತರ ಪ್ರಕಾರ, ಗಾಜಾಪಟ್ಟಿ ಜನವಸತಿ ಮರುನಿರ್ಮಾಣಗೊಳ್ಳಲು ದಶಕಗಳೇ ಬೇಕಾಗಬಹುದು.

‘ಈ ಯುದ್ಧ ವಿಧ್ವಂಸಕ ಮತ್ತು ಶೋಚನೀಯವಾದುದು. ಕಲ್ಲೂ ಕೂಡಾ ರೋಧಿಸುವಂತಹ ಸ್ಥಿತಿ’ ಎನ್ನುತ್ತಾರೆ ನಿರಾಶ್ರಿತರ ಶಿಬಿರದಲ್ಲಿ ನೆಲೆಸಿರುವ 60 ವರ್ಷದ ಶಿಫಾ ಹೆಜ್ಜೊ. ‘ಗಾಜಾಪಟ್ಟಿಯ ಆ ದಿನಗಳ ಕಂಡವರು ಇಂದು ಕಣ್ಣೀರಿಡುವುದು ಖಚಿತ’ ಎನ್ನುತ್ತಾರೆ.

ಇಂದಿನ ಸ್ಥಿತಿಗೆ ಹಮಾಸ್‌ ನೇರ ಕಾರಣ ಎಂದು ಇಸ್ರೇಲ್‌ ಸೇನೆ ದೂಷಿಸುತ್ತದೆ. ಕಳೆದ ಅಕ್ಟೋಬರ್‌ 7ರಂದು ದಾಳಿ ನಡೆಸಿ 1,200 ಮಂದಿಯನ್ನು ಹತ್ಯೆ ಮಾಡಿ, 250 ಜನರನ್ನು ಒತ್ತೆಯಾಳಾಗಿ ಒಯ್ದಿತ್ತು. ಇದೇ ಯುದ್ಧದ ಕಿಡಿ ಹೊತ್ತಿಸಿತು ಎಂಬುದು ಸೇನೆ ವಾದ. ಹಮಾಸ್‌ ದಾಳಿ ನಡೆಸಿ, ಇಸ್ರೇಲ್‌ನಲ್ಲಿ ನೂರಾರು ಕಿ.ಮೀ ದೂರದ ಸುರಂಗ, ಮೂಲಸೌಕರ್ಯ ಹಾಳುಗೆಡವಿದೆ ಎನ್ನುತ್ತದೆ ಸೇನೆ.

ಈ ಒಂದು ವರ್ಷದಲ್ಲಿ ಗಾಜಾಪಟ್ಟಿಯಲ್ಲಿ ಶೇ 66ರಷ್ಟು ಕಟ್ಟಡಗಳು ಧ್ವಂಸವಾಗಿವೆ. 2.27 ಲಕ್ಷ ಮನೆಗಳು ನಾಶವಾಗಿವೆ. ಹೆಚ್ಚಿನವು ತೀವ್ರ ಸ್ವರೂಪದಲ್ಲಿ ಹಾನಿಗೊಂಡಿವೆ.

ವಿಶ್ವಬ್ಯಾಂಕ್‌ನ ಅಂದಾಜಿಸಿರುವ ಪ್ರಕಾರ, ನಷ್ಟದ ಒಟ್ಟು ಮೊತ್ತ 18.5 ಬಿಲಿಯನ್‌ ಡಾಲರ್‌ಗಳು. ಇದು, ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾದ 2022ರ ವರ್ಷದ ಒಟ್ಟು ಹಣಕಾಸು ಮೊತ್ತಕ್ಕೆ ಸಮನಾದುದು. ಸುಮಾರು 23 ಲಕ್ಷ ಜನರು ಅತಂತ್ರರಾಗಿದ್ದಾರೆ.

ಗಾಜಾದಲ್ಲಿ ಮೂಡಿರುವ ಅವಶೇಷಗಳ ತೂಕವೇ ಸುಮಾರು 4 ಕೋಟಿ ಟನ್‌ ಆಗಿದೆ. ಈ ಅವಶೇಷಗಳನ್ನು ತೆರವುಗೊಳಿಸುವದಕ್ಕಾಗಿಯೇ 15 ವರ್ಷ ಬೇಕು ಎಂಬುದು ವಿಶ್ವಸಂಸ್ಥೆಯ ಅಂದಾಜು.

ಇಸ್ರೇಲ್‌ನತ್ತ ಹಮಾಸ್‌ನಿಂದ ರಾಕೆಟ್ ದಾಳಿ

ಗಾಜಾಪಟ್ಟಿ: ಹಮಾಸ್‌ ದಾಳಿ ನಡೆಸಿ ಒಂದು ವರ್ಷ ಕಳೆದ ದಿನದಂತೆ ಗಾಜಾದಲ್ಲಿರುವ ಪ್ಯಾಲೆಸ್ಟೀನ್‌ ಬಂಡುಕೋರರು ಇಸ್ರೇಲ್‌ ಗುರಿಯಾಗಿಸಿ ನಾಲ್ಕು ರಾಕೆಟ್‌ಗಳನ್ನು ಪ್ರಯೋಗಿಸಿದ್ದಾರೆ. ಅಲ್ಲದೆ ವಿವಿಧೆಡೆ ಇಸ್ರೇಲ್‌ ಸೇನೆಯನ್ನು ಗುರಿಯಾಗಿಸಿಯೂ ದಾಳಿ ನಡೆಸಲಾಗಿದೆ ಎಂದು ಹಮಾಸ್‌ ಹೇಳಿಕೊಂಡಿದೆ. ಗಾಜಾದಿಂದ ಪ್ರಯೋಗಿಸಲಾಗಿದ್ದ ರಾಕೆಟ್‌ಗಳಲ್ಲಿ ಮೂರನ್ನು ಹೊಡೆದುರುಳಿಸಲಾಗಿದೆ. ಒಂದು ರಾಕೆಟ್‌ ಬಯಲು ಪ್ರದೇಶದಲ್ಲಿ ಬಿದ್ದಿದೆ. ಪ್ರಾಣಹಾನಿ ಸಂಭವಿಸಿಲ್ಲ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಇಸ್ರೇಲ್‌ ದಾಳಿ: 10 ಅಗ್ನಿಶಾಮಕ ಸಿಬ್ಬಂದಿ ಸಾವು

ಬೈರೂತ್: ಇಸ್ರೇಲ್‌ ಸೇನೆಯು ಬೈರೂತ್ ನಗರದ ಮೇಲೆ ಸೋಮವಾರ ವಾಯುದಾಳಿ ನಡೆಸಿದ್ದು 10 ಮಂದಿ ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಅಗ್ನಿಶಾಮಕ ಸಿಬ್ಬಂದಿ ನೆಲಸಿದ್ದ ಕಟ್ಟಡದ ಮೇಲೆದಾಳಿ ನಡೆದಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿದ್ದಾರೆ. ಸಾವಿನ ಸಂಖ್ಯೆ ಏರಬಹುದು ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್‌ನ ಸ್ಥಾನಕ್ಕೆ ತೀವ್ರ ಧಕ್ಕೆಯಾಗಿದೆ. ತೀವ್ರ ಪೆಟ್ಟು ತಿಂದಿದೆ ಎಂದುಕೊಂಡಿದ್ದ ದೇಶವೇ ಈಗ ಜನರನ್ನು ಶಿಕ್ಷಿಸುವ ದೇಶವಾಗಿದೆ.
ಬಿಗ್ನ್ಯೂ ಜೆಜಿನ್‌ಸ್ಕಿ, ಅಮೆರಿಕದ ಮಾಜಿ ಭದ್ರತಾ ಸಲಹೆಗಾರ
ನಾವು ನಮ್ಮ ಮಕ್ಕಳ ಹಿತದೃಷ್ಟಿ ಹಾಗೂ ದೇಶದ ಭವಿಷ್ಯಕ್ಕಾಗಿ ಈ ವಲಯದ ಭದ್ರತೆಯ ಸ್ವರೂಪವನ್ನೇ ನಾವು ಬದಲಿಸುತ್ತಿದ್ದೇವೆ. ಅಕ್ಟೋಬರ್ 7 2023ರ ಘಟನೆ ಮತ್ತೆಂದೂ ಎಂದಿಗೂ ಮರುಕಳಿಸಬಾರದು.
ಬೆಂಜಮಿನ್‌ ನೆತನ್ಯಾಹು, ಪ್ರಧಾನಮಂತ್ರಿ, ಇಸ್ರೇಲ್
ಅಕ್ಟೋಬರ್ 7 ಅನ್ನು ಪ್ಯಾಲೆಸ್ಟೀನಿಯರ ಪಾಲಿನ ಕರಾಳ ದಿನವಾಗಿಯೂ ಇತಿಹಾಸ ಸ್ಮರಿಸುತ್ತಿದೆ. ಇದಕ್ಕೆ ಆ ದಿನದಂದು ಸಂಘರ್ಷವನ್ನು ಆರಂಭಿಸಿದ ಹಮಾಸ್‌ ಕಾರಣ. ಈ ಒಂದು ವರ್ಷದಲ್ಲಿ ಹಲವು ನಾಗರಿಕರು ಸಾಕಷ್ಟು ನೋವು ಅನುಭವಿಸಿದ್ದಾರೆ.
ಜೋ ಬೈಡನ್, ಅಮೆರಿಕ ಅಧ್ಯಕ್ಷ
ನೋವು ಶಮನವಾಗಿಲ್ಲ. ಒಂದು ವರ್ಷದ ಹಿಂದೆ ಇದ್ದಷ್ಟೇ ಈಗಲೂ ಹಸಿಯಾಗಿದೆ. ಇಸ್ರೇಲ್‌ ನಾಗರಿಕರ ನೋವು ನಮ್ಮದೂ ಆಗಿದೆ.
ಮ್ಯಾನುಯೆಲ್‌ ಮ್ಯಾಕ್ರನ್, ಫ್ರಾನ್ಸ್‌ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.