ಗಾಜಾ ಪಟ್ಟಿ: ಇಲ್ಲಿನ ಅತಿದೊಡ್ಡ ಚಿಕಿತ್ಸಾ ಕೇಂದ್ರ ಅಲ್ ಶಿಫಾ ಆಸ್ಪತ್ರೆ ‘ಸಾವಿನ ವಲಯ’ವಾಗಿ ಮಾರ್ಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದೆ.
ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ಸಹ ಅದು ಪ್ರಕಟಿಸಿದೆ.
ಆಸ್ಪತ್ರೆಯ ಪ್ರವೇಶ ದ್ವಾರದಲ್ಲೇ ಸಾಮೂಹಿಕ ಸಮಾಧಿ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಇನ್ನೂ ಸುಮಾರು 300 ರೋಗಿಗಳು ಮತ್ತು 25 ಆರೋಗ್ಯ ಸಿಬ್ಬಂದಿ ಸಿಲುಕಿಕೊಂಡಿದ್ದಾರೆ ಎಂದು ಅದು ಹೇಳಿದೆ.
ಕಳೆದ ಬುಧವಾರ ಇಸ್ರೇಲಿ ಪಡೆಗಳು ದಾಳಿ ನಡೆಸಿ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಈ ಆಸ್ಪತ್ರೆಗೆ ಡಬ್ಲ್ಯುಎಚ್‌ಒ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಹುತೇಕ ಎಲ್ಲ ಚಿಕಿತ್ಸಾ ಕೇಂದ್ರಗಳು ಈಗಾಗಲೇ ತುಂಬಿತುಳುಕುತ್ತಿವೆ. ಗಾಜಾದ ಜನರು ತೀವ್ರ ನೋವು ಅನುಭವಿಸುತ್ತಿದ್ದಾರೆ. ಕದನ ವಿರಾಮವೊಂದೇ ಪರಿಹಾರ ಎಂದು ಅದು ಹೇಳಿದೆ.
ಆರು ವಾರಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಗಾಜಾ ಪಟ್ಟಿಯಿಂದ ಸುಮಾರು 16 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಸೇನಾ ಕಾರ್ಯಾಚರಣೆ ಮತ್ತಷ್ಟು ವಿಸ್ತರಣೆ:
ಹಮಾಸ್ ಸಂಘಟನೆಯ ನಾಶಕ್ಕಾಗಿ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಭಾನುವಾರ ಹೇಳಿದೆ.
ಗಾಜಾ ಪಟ್ಟಿಯ ಪ್ರದೇಶದಲ್ಲಿ ನೆರೆಹೊರೆಯ ಮತ್ತಷ್ಟು ಸ್ಥಳಗಳಿಗೆ ತನ್ನ ಕಾರ್ಯಾಚರಣೆ ವಿಸ್ತರಿಸಲಾಗುತ್ತಿದೆ ಎಂದು ಅದು ಹೇಳಿದೆ.
ಅ.7ರಂದು ಇಸ್ರೇಲಿಗರ ಮೇಲೆ ಹಮಾಸ್ ಭೀಕರ ದಾಳಿ ನಡೆಸಿ ನಾಗರಿಕರು ಮತ್ತು ಸೈನಿಕರು ಸೇರಿ ಸುಮಾರು 1,200 ಮಂದಿ ಇಸ್ರೇಲಿಗರನ್ನು ಕೊಂದು, ಸುಮಾರು 240 ಜನರನ್ನು ಒತ್ತೆ ಇರಿಸಿಕೊಂಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್, ಹಮಾಸ್ ಅನ್ನು ಸಂಪೂರ್ಣ ನಾಶಮಾಡಲು ಪ್ರತಿಜ್ಞೆ ಕೈಗೊಂಡಿದೆ.
ಸಾವಿನ ಸಂಖ್ಯೆ 12,300ಕ್ಕೆ ಏರಿಕೆ:
ಇಸ್ರೇಲ್ ಸೇನೆಯು ಎಡೆಬಿಡದೆ ನಡೆಸುತ್ತಿರುವ ವೈಮಾನಿಕ ದಾಳಿ ಮತ್ತು ನೆಲದ ಮೇಲಿನ ಕಾರ್ಯಾಚರಣೆಯಲ್ಲಿ ಈವರೆಗೆ 12,300 ಜನ ಪ್ಯಾಲೆಸ್ಟೀನ್ ನಾಗರಿಕರನ್ನು ಕೊಂದಿದ್ದು, ಮೃತರಲ್ಲಿ 5,000ಕ್ಕೂ ಹೆಚ್ಚು ಮಕ್ಕಳಿದ್ದಾರೆ ಎಂದು ಹಮಾಸ್ ಸರ್ಕಾರ ಹೇಳಿದೆ.
ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿರುವ ವಿಶ್ವಸಂಸ್ಥೆಯ ಶಾಲೆ ಸೇರಿ ಉತ್ತರ ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ಶನಿವಾರ ನಡೆಸಿರುವ ಎರಡು ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಜಬಾಲಿಯ ಶಿಬಿರದ ಮತ್ತೊಂದು ಕಟ್ಟಡದ ಮೇಲೆ ನಡೆದಿರುವ ಪ್ರತ್ಯೇಕ ದಾಳಿಯಲ್ಲಿ ಒಂದೇ ಕುಟುಂಬದ 32 ಜನರು ಸಾವಿಗೀಡಾಗಿದ್ದಾರೆ. ಅವರಲ್ಲಿ 19 ಮಕ್ಕಳು ಸೇರಿದ್ದಾರೆ ಎಂದು ಹಮಾಸ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿಗಳನ್ನು ಉಲ್ಲೇಖಿಸದೇ ಇಸ್ರೇಲ್ ಸೇನೆಯು, ‘ಜಬಾಲಿಯಾ ಪ್ರದೇಶದಲ್ಲಿನ ಘಟನೆ’ ಪರಿಶೀಲಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.