ಇಸ್ಲಾಮಾಬಾದ್: ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಫೆಬ್ರುವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ರಾಷ್ಟ್ರೀಯ ಸಂಸತ್ತು ಮತ್ತು ಪ್ರಾಂತೀಯ ಶಾಸಕಾಂಗ ಸಭೆಗಳನ್ನು ವಿಸರ್ಜನೆ ಮಾಡಿದ 90 ದಿನಗಳೊಳಗೆ ಚುನಾವಣೆಗಳನ್ನು ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗವು(ಇಸಿಪಿ) ಸುಪ್ರೀಂ ಕೋರ್ಟ್‌ಗೆ ದಿನಾಂಕವನ್ನು ಸಲ್ಲಿಸಿದೆ.
2024ರ ಜನವರಿಯಲ್ಲಿ ಚುನಾವಣೆ ನಡೆಸುವುದಾಗಿ ಕಳೆದ ತಿಂಗಳು ಇಸಿಪಿ ಘೋಷಿಸಿತ್ತು. ಆದರೆ, ದಿನಾಂಕವನ್ನು ಘೋಷಿಸದೆ ನಿಲ್ಲಿಸಿತ್ತು.
ಕ್ಷೇತ್ರ ಪುನರ್‌ವಿಂಗಡಣೆ ಕೆಲಸ ಮುಗಿದ ನಂತರ ಚುನಾವಣೆ ನಡೆಸಲು 54 ದಿನಗಳ ಅಗತ್ಯವಿದೆ ಎಂದು ಇಸಿಪಿ ಈ ಹಿಂದೆ ಘೋಷಿಸಿತ್ತು. ಹಾಗಾಗಿ, ದೇಶದಲ್ಲಿ ಚುನಾವಣೆ ನಡೆಸುವ ಬಗ್ಗೆ ನಿಲುವನ್ನು ಸ್ಪಷ್ಟವಾಗಿ ತಿಳಿಸುವಂತೆ ಸುಪ್ರೀಂ ಕೋರ್ಟ್ ಪೀಠವು ಚುನಾವಣಾ ಆಯೋಗದ ವಕೀಲರನ್ನು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಇಸಿಪಿ ವಕೀಲ ಸಜೀಲ್ ಸ್ವಾತಿ, ಡಿಸೆಂಬರ್ 5ರಂದು ಕ್ಷೇತ್ರಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಮತ್ತು ಜನವರಿ 29ರೊಳಗೆ ಕ್ಷೇತ್ರಗಳ ರೇಖಾಚಿತ್ರ ಸೇರಿದಂತೆ ಇತರ ಎಲ್ಲ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗುವುದು. ಆದ್ದರಿಂದ ನಾವು ಫೆ.8ರಂದು ಚುನಾವಣೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಈ ಸಂಬಂಧ ಅಧ್ಯಕ್ಷ ಆರಿಫ್ ಅಲ್ವಿ ಅವರೊಂದಿಗೆ ಸಮಾಲೋಚನೆ ನಡೆಸುವುದಾಗಿಯೂ ಇಸಿಪಿ ನ್ಯಾಯಾಲಯಕ್ಕೆ ತಿಳಿಸಿದೆ.
ನಂತರ, ನಿಗದಿತ ದಿನಾಂಕದಂದೇ ಯಾವುದೇ ವಿಳಂಬವಿಲ್ಲದೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಬಯಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.