ಬರ್ಲಿನ್: ಜರ್ಮನಿಯ ಹಣಕಾಸು ಸಚಿವರನ್ನು ಪದಚ್ಯುತಿಗೊಳಿಸಿರುವ ಚಾನ್ಸಲರ್ ಓಲಾಫ್ ಸ್ಕೋಲ್ಜ್, 2025ರ ಜನವರಿಯಲ್ಲಿ ವಿಶ್ವಾಸಮತ ಯಾಚನೆ ನಡೆಸುವುದಾಗಿ ಘೋಷಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬುಧವಾರವಷ್ಟೇ ಪ್ರಕಟವಾಗಿದೆ. ಇದರ ಬೆನ್ನಲ್ಲೇ, ಯುರೋಪಿನ ಬೃಹತ್ ಆರ್ಥಿಕತೆಗಳಲ್ಲಿ ಒಂದಾದ ಜರ್ಮನಿಯಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರುವ ಲಕ್ಷಣ ಕಂಡುಬಂದಿದೆ.
ಹಣಕಾಸು ಸಚಿವರೂ ಆಗಿರುವ ಮೈತ್ರಿಯ ಭಾಗವಾಗಿರುವ 'ಫ್ರೀ ಡೆಮಾಕ್ರಟ್ಸ್ ಪಕ್ಷ'ದ (ಎಫ್‌ಡಿಪಿ) ಕ್ರಿಸ್ಟಿಯನ್ ಲಿಂಡ್ನೆರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವ ಓಲಾಫ್ ಅವರು, ತಮ್ಮ 'ಸಾಮಾಜಿಕ ಪ್ರಜಾಪ್ರಭುತ್ವವಾದಿ ಪಕ್ಷ'ದೊಂದಿಗೆ ಏಕಾಂಗಿಯಾಗಿ ಅಥವಾ ಮಿತ್ರ ಪಕ್ಷ 'ಗ್ರೀನ್ಸ್'ನೊಂದಿಗೆ ಸೇರಿ ಅಲ್ಪ ಬಹುಮತದ ಸರ್ಕಾರವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಬಜೆಟ್ ನೀತಿ ಮತ್ತು ಜರ್ಮನಿಯ ಆರ್ಥಿಕ ದಿಕ್ಸೂಚಿಗೆ ಸಂಬಂಧಿಸಿದಂತೆ ಉಂಟಾದ ಕಿತ್ತಾಟ, ಸರ್ಕಾರದ ಜನಪ್ರಿಯತೆ ಕುಸಿಯುತ್ತಿರುವುದು ಹಾಗೂ ತೀವ್ರ ಬಲ, ಎಡಪಂಥೀಯ ಶಕ್ತಿಗಳ ತಿಕ್ಕಾಟವು ಮೂರು ಪಕ್ಷಗಳನ್ನೊಳಗೊಂಡ ಮೈತ್ರಿಯಲ್ಲಿ ಬಿರುಕು ಮೂಡಿಸಿದೆ.
ಲಿಂಡ್ನೆರ್ ಅವರನ್ನು ವಜಾಗೊಳಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಓಲಾಫ್, 'ಸಮರ್ಥವಾಗಿ ಕಾರ್ಯನಿರ್ವಹಿಸುವ ಮತ್ತು ದೇಶಕ್ಕೆ ಅಗತ್ಯವಿರುವ ನಿರ್ಧಾರಗಳನ್ನು ಕೈಗೊಳ್ಳುವ ದೃಢ ಸರ್ಕಾರ ನಮಗೆ ಬೇಕಿದೆ' ಎಂದಿದ್ದಾರೆ.
ಬಜೆಟ್ ವಿಚಾರಗಳಲ್ಲಿ ಮೂಗು ತೂರಿಸುವುದು, ನಿರ್ಧಾರಗಳಿಗೆ ತೊಡಕುಂಟು ಮಾಡುತ್ತಿದ್ದ ಕಾರಣಕ್ಕೆ ಲಿಂಡ್ನೆರ್ ಅವರನ್ನು ವಜಾಗೊಳಿಸಿರುವುದಾಗಿ ಹೇಳಿರುವ ಚಾನ್ಸಲರ್, ಅವರು (ಕ್ರಿಸ್ಟಿಯನ್ ಲಿಂಡ್ನೆರ್) ನಕಲಿ ಕಾರಣಗಳನ್ನು ಮುಂದೊಡ್ಡಿ ಕಾನುನುಗಳಿಗೆ ಅಡ್ಡಿಪಡಿಸುತ್ತಿದ್ದರು ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.