ADVERTISEMENT

ಬಾಲಕರೊಂದಿಗೆ ನೃತ್ಯ: ಜಿರ್ಗಾ ನ್ಯಾಯದಂತೆ  ಪಾಕಿಸ್ತಾನದಲ್ಲಿ ಯುವತಿಯ ಕೊಲೆ

ಏಜೆನ್ಸೀಸ್
Published 28 ನವೆಂಬರ್ 2023, 14:13 IST
Last Updated 28 ನವೆಂಬರ್ 2023, 14:13 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಹಿಸ್ತಾನ್ (ಪಾಕಿಸ್ತಾನ): ತನ್ನ ವಯಸ್ಸಿನ ಹುಡುಗರೊಂದಿಗೆ ನರ್ತಿಸಿದ ಆರೋಪದಡಿ ಸ್ಥಳೀಯ ಹಿರಿಯರು ನಡೆಸುವ ಜಿರ್ಗಾ ನ್ಯಾಯದಂತೆ 18 ವರ್ಷದ ಯುವತಿಯನ್ನು ಕೊಲೆ ಮಾಡಲಾಗಿದ್ದು, ಇದು ಮರ್ಯಾದಾ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಇಬ್ಬರು ಯುವತಿಯರು ತಮ್ಮ ಸ್ನೇಹಿತರಾದ ಕೆಲ ಯುವಕರೊಂದಿಗೆ ನರ್ತಿಸಿದ್ದಾರೆ. ಇದರ ವಿಡಿಯೊ ಎಲ್ಲೆಡೆ ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಸಾಂಪ್ರದಾಯಿಕ ನ್ಯಾಯ ವ್ಯವಸ್ಥೆ ಜಿರ್ಗಾ, ಇಬ್ಬರು ಯುವತಿಯರಿಗೂ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದರ ಮಾಹಿತಿ ಪಡೆದ ಪೊಲೀಸರ ಮಧ್ಯಪ್ರವೇಶದಿಂದ ಒಬ್ಬ ಯುವತಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಆದರೆ ಮತ್ತೊಬ್ಬ ಯುವತಿಯನ್ನು ಜಿರ್ಗಾ ನ್ಯಾಯದಂತೆ ಹತ್ಯೆ ಮಾಡಲಾಗಿದೆ. ಈ ಪ್ರಕರಣ ಪಾಕಿಸ್ತಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ಮರ್ಯಾದಾ ಹತ್ಯೆಯನ್ನು ಕೊನೆಗೊಳಿಸುವಂತೆ ಹಲವರು ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬ ಸದಸ್ಯರನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಮುಖ್ತಿಯಾರ್ ತನೋಲಿ ತಿಳಿಸಿದ್ದಾರೆ.

ವಿಡಿಯೊದಲ್ಲಿರುವ ಯುವಕರು ಘಟನೆ ನಂತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವುದನ್ನು ಅರಿತು ಪರಾರಿಯಾಗಿದ್ದಾರೆ. ಹತ್ಯೆಗೀಡಾದ ಬಾಲಕಿಯ ದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ರಕ್ಷಿಸಲಾದ ಯುವತಿಯು ತನ್ನ ಪಾಲಕರಿಂದ ಯಾವುದೇ ಅಪಾಯವಿಲ್ಲ ಹಾಗೂ ನಾನು ಅವರೊಂದಿಗೆ ಹೋಗುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

2011ರಲ್ಲೂ ಇಂಥದ್ದೇ ಘಟನೆ ಪಾಕಿಸ್ತಾನದಲ್ಲಿ ನಡೆದಿತ್ತು. ಜಿರ್ಗಾ ನ್ಯಾಯದಂತೆ ಐವರು ಮಹಿಳೆಯರನ್ನು ಹತ್ಯೆ ಮಾಡಲಾಗಿತ್ತು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪುರುಷರ ಕೈಗೆ ಚಪ್ಪಾಳೆ ತಟ್ಟಿದ್ದು ಇವರ ಮೇಲಿದ್ದ ಆರೋಪವಾಗಿತ್ತು. ಕೇವಲ ಮಹಿಳೆಯರು ಮಾತ್ರವಲ್ಲದೇ, ಮೂವರು ಪುರುಷರನ್ನೂ ಹತ್ಯೆ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.