ವಿಶ್ವಸಂಸ್ಥೆ: ಜಾಗತಿಕವಾಗಿ ಉದ್ಯೋಗ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಂದಿಸುವುದು, ಅವರಿಗೆ ಕಿರುಕುಳ ನೀಡುತ್ತಿರುವುದು ವ್ಯಾಪಕವಾಗಿದೆ. ಅದರಲ್ಲೂ, ಮಹಿಳೆಯರೇ ಹೆಚ್ಚಾಗಿ ನಿಂದನೆ, ಕಿರುಕುಳದಂತಹ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಈ ಕುರಿತು ವಿವರಿಸಲಾಗಿದೆ.
ಉದ್ಯೋಗ ಸ್ಥಳಗಳಲ್ಲಿನ ಕಿರುಕುಳ ಹಾಗೂ ಹಿಂಸೆ ಕುರಿತು ಇದೇ ಮೊದಲ ಬಾರಿಗೆ ನಡೆಸಿರುವ ಜಾಗತಿಕ ಸಮೀಕ್ಷೆಯಲ್ಲಿ ಈ ಅಂಶಗಳು ಕಂಡುಬಂದಿವೆ ಎಂದು ಐಎಲ್‌ಒ ಹೇಳಿದೆ. ಲಾಯ್ಡ್ಸ್ ರಜಿಸ್ಟರ್ ಫೌಂಡೇಷನ್ ಹಾಗೂ ಗ್ಯಾಲಪ್ ಎಂಬ ಸಂಸ್ಥೆಗಳು ಈ ಸಮೀಕ್ಷೆಯಲ್ಲಿ ಐಎಲ್‌ಒಯೊಂದಿಗೆ ಕೈಜೋಡಿಸಿದ್ದವು.
‘ಉದ್ಯೋಗ ಸ್ಥಳದಲ್ಲಿ ಹಿಂಸೆ ಹಾಗೂ ಕಿರುಕುಳ ನೀಡುವುದು ಅಪಾಯಕಾರಿ ವಿದ್ಯಮಾನ. ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಇವು ಭಾರಿ ಪರಿಣಾಮವನ್ನುಂಟು ಮಾಡುತ್ತವೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಉದ್ಯೋಗಿಗೆ ಮಾತ್ರವಲ್ಲ, ಉದ್ಯಮಗಳು ಹಾಗೂ ಸಮಾಜದ ಮೇಲೂ ಪರಿಣಾಮವನ್ನುಂಟಾಗುತ್ತದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ’ ಎಂದು ವಿವರಿಸಲಾಗಿದೆ.121 ದೇಶಗಳ 75 ಸಾವಿರದಷ್ಟು ಉದ್ಯೋಗಿಗಳು ಸಮೀಕ್ಷೆಯ ಭಾಗವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.