ವಾಷಿಂಗ್ಟನ್: ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ಸಂಚು ರೂಪಿಸಲಾಗಿತ್ತು ಎಂಬ ಪ್ರಕರಣದಲ್ಲಿ ಭಾರತೀಯ ಅಧಿಕಾರಿ ವಿರುದ್ಧದ ಆರೋಪಗಳ ಕುರಿತ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿರುವ ಭಾರತದ ಕ್ರಮವನ್ನು ಅಮೆರಿಕ ಸ್ವಾಗತಿಸಿದೆ.
‘ತನ್ನ ಅಧಿಕಾರಿ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ ಭಾರತ ಹೇಳಿರುವುದು ಉತ್ತಮ ಹಾಗೂ ಸೂಕ್ತ ನಿರ್ಧಾರ. ತನಿಖೆಯ ಫಲಿತಾಂಶಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಪ್ರತಿಕ್ರಿಯಿಸಿದ್ದಾರೆ.
ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಪ್ರಕ್ರಿಯೆ ನಡೆಯುತ್ತಿರುವ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.
‘ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದಷ್ಟೆ ನಾನು ಹೇಳಬಲ್ಲೆ. ಕಳೆದ ಕೆಲ ವಾರಗಳಿಂದ ಈ ವಿಷಯವನ್ನು ನಾವು ನೇರವಾಗಿ ಭಾರತ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದೇವೆ’ ಎಂದೂ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಭೇಟಿ ನಂತರ, ಪನ್ನೂ ಹತ್ಯೆಗೆ ರೂಪಿಸಿದ್ದ ಸಂಚನ್ನು ಭೇದಿಸಲಾಯಿತು. ಆದರೆ, ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಾಧಿಕಾರಿ (ಕಾರ್ಯತಂತ್ರ ಸಂವಹನ) ಆಗಿರುವ ಜಾನ್ ಕಿರ್ಬಿ ಹೇಳಿದ್ದಾರೆ.
‘ನ್ಯಾಯಾಂಗ ಇಲಾಖೆಯು ತನಿಖೆ ನಡೆಸುತ್ತಿರುವ ಕಾರಣ, ಈ ಬಗ್ಗೆ ಹೆಚ್ಚು ಮಾತನಾಡವುದಿಲ್ಲ. ಆದರೆ, ಎರಡು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಮೊದಲನೆದಾಗಿ ಭಾರತ ನಮ್ಮ ಮುಖ್ಯ ಪಾಲುದಾರ ದೇಶವಾಗಿ ಇರಲಿದೆ. ಎರಡನೆದಾಗಿ, ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ಕಿರ್ಬಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.