ವಾಷಿಂಗ್ಟನ್: ಅಮೆರಿಕಾದ ಓಹಿಯೊದಲ್ಲಿರುವ ಕೊಲಂಬಸ್ ಪ್ರಾಣಿಸಂಗ್ರಹಾಲಯ ಹಾಗೂ ಅಕ್ವೇರಿಯಂನಲ್ಲಿ ಸಂಭ್ರಮ ಹಾಗೂ ಅಚ್ಚರಿ ಎರಡೂ ಮನೆ ಮಾಡಿತ್ತು. ಪ್ರಾಣಿ ಸಂಗ್ರಹಾಲಯದ ಗೋರಿಲ್ಲಾ ಹೆಣ್ಣು ಮರಿಗೆ ಜನ್ಮ ನೀಡಿತ್ತು.
ಮೃಗಾಲಯದ ಸಿಬ್ಬಂದಿಗೆ ಮರಿ ಹುಟ್ಟಿದ ಸಂಭ್ರಮ ಒಂದೆಡೆಯಾದರೆ, ಗಂಡು ಗೋರಿಲ್ಲಾ ಮರಿಗೆ ಜನ್ಮ ನೀಡಿತೇ...? ಎಂಬ ಅಚ್ಚರಿ ಮತ್ತೊಂದು ಕಡೆ.
ಇದರ ನಡುವೆಯೇ ನವಜಾತ ಮರಿಗೆ ನಾಮಕರಣವನ್ನೂ ಮಾಡಲಾಯಿತು. ಆದರೆ ಎಲ್ಲರಿಗೂ ಕಾಡುತ್ತಿದ್ದ ಪ್ರಶ್ನೆ ಗಂಡು ಗೋರಿಲ್ಲಾ ‘ಸುಲ್ಲಿ’ ಗರ್ಭ ಧರಿಸಿದ್ದು ಹೇಗೆ...?.
2019ರಲ್ಲಿ ಸುಲ್ಲಿ ತನ್ನ ತಾಯಿ ಜತೆಗೆ ಕೊಲಂಬಸ್ ಪ್ರಾಣಿಸಂಗ್ರಹಾಲಯಕ್ಕೆ ಬಂದು ಸೇರಿತು. ಇಲ್ಲಿನ ಸಿಬ್ಬಂದಿ ದೃಷ್ಟಿಯಲ್ಲಿ ಸುಲ್ಲಿ ಗಂಡಾಗಿಯೇ ಬೆಳೆಯಿತು. ಅದರಂತೆಯೇ ಆರೈಕೆ ಪಡೆಯಿತು. ಆದರೆ ಅದು ಗರ್ಭ ಧರಿಸಿದ್ದು ಮತ್ತು ಜನ್ಮ ನೀಡಿದ ನಂತರ ಎದ್ದ ಪ್ರಶ್ನೆಯ ಬೆನ್ನು ಹತ್ತಿದ ಸಿಬ್ಬಂದಿಗೆ ನಾಲ್ಕು ವರ್ಷಗಳ ನಂತರ ತಿಳಿದಿದ್ದು ‘ಸುಲ್ಲಿ ಅವನಲ್ಲ, ಅವಳು’.
ಪ್ರಾಣಿಸಂಗ್ರಹಾಲಯವು ಅಧಿಕೃತ ಬ್ಲಾಗ್‌ನಲ್ಲಿ ಈ ಕುರಿತು ಬರೆದುಕೊಂಡಿದೆ. ‘ಗೋರಿಲ್ಲಗಳು 8ನೇ ವರ್ಷಕ್ಕೆ ಬರುವವರೆಗೂ ಅವುಗಳ ದೇಹ ರಚನೆ ಗಮನಿಸಿ ಅದು ಗಂಡೋ ಅಥವಾ ಹೆಣ್ಣೋ ಎಂದು ಹೇಳುವುದು ಕಷ್ಟ. ಗಂಡು ಹಾಗೂ ಹೆಣ್ಣು ಸಮಾನ ಮೈಕಟ್ಟು ಹೊಂದಿರುತ್ತವೆ. ಎಂಟನೇ ವರ್ಷದವರೆಗೂ ಅವುಗಳ ಲಿಂಗ ಪತ್ತೆಯೇ ದೊಡ್ಡ ಸವಾಲು. ಲಿಂಗ ಪತ್ತೆಗೆ ಪ್ರಮುಖ ಅಂಗಗಳು ಗೋಚರಿಸುವುದಿಲ್ಲ’ ಎಂದಿದೆ.
‘ಒಂದು ವಯೋಮಾನದ ನಂತರ ಗಂಡು ಹಾಗೂ ಹೆಣ್ಣು ತುಂಬಾ ಭಿನ್ನವಾಗಿ ಕಾಣುತ್ತವೆ. ಗಂಡು ಗೋರಿಲ್ಲಾ ದೊಡ್ಡದಾಗಿ ಬೆಳೆಯುತ್ತದೆ. ಹಿಂಭಾಗದಲ್ಲಿ ಬಿಳಿ ಬಣ್ಣದ್ದಾಗಿರುತ್ತದೆ. ತಲೆ ಹಿಂಭಾಗದಲ್ಲಿ ಸೆಗಿಟ್ಟಲ್ ಕ್ರೆಸ್ಟ್ ಎಂಬ ದೊಡ್ಡ ಊತ ಕಾಣಿಸುತ್ತದೆ’ ಎಂದು ವಿವರಿಸಲಾಗಿದೆ.
ಸುಲ್ಲಿ ಕೊಲಂಬಸ್ ಪ್ರಾಣಿ ಸಂಗ್ರಹಾಲಯದಲ್ಲಿ ಹುಟ್ಟಿಲ್ಲ. ಬೇರೆಡೆ ಹುಟ್ಟಿ ಬೆಳೆಯುತಿತ್ತು. ನಂತರ 2019ರಲ್ಲಿ ಸುಲ್ಲಿ ಕೊಲಂಬಸ್‌ಗೆ ಬಂದು ಸೇರುವಾಗ ಅಲ್ಲಿಯವರ ತಪ್ಪು ಗ್ರಹಿಕೆಯಿಂದ ಗಂಡು ಎಂದೇ ಕೊಲಂಬಸ್‌ನಲ್ಲಿ ದಾಖಲಾಗಿತ್ತು. ಆರೋಗ್ಯವಾಗಿದ್ದ ಸುಲ್ಲಿಗೆ ಹೆಚ್ಚಿನ ವೈದ್ಯಕೀಯ ಆರೈಕೆ ಬೇಡವಾದ ಕಾರಣ, ಪ್ರಾಣಿ ಸಂಗ್ರಹಾಲಯದ ವೈದ್ಯಕೀಯ ಸಿಬ್ಬಂದಿಯೂ ಇದರ ಲಿಂಗ ಪತ್ತೆಯ ಗೋಜಿಗೇ ಹೋಗಲಿಲ್ಲ.
ಸಾಮಾನ್ಯವಾಗಿ ಗೋರಿಲ್ಲಗಳು ಗರ್ಭ ಧರಿಸಿದರೆ ಅದು ಬಾಹ್ಯವಾಗಿ ಗೋಚರಿಸದ ಕಾರಣ, ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಗಮನಕ್ಕೆ ಬಾರದೇ ಹೋಯಿತು. ಈಗ ಎಲ್ಲವೂ ತಿಳಿದ ನಂತರ ಸಿಬ್ಬಂದಿ ಸುಲ್ಲಿ ಹಾಗೂ ಆಕೆಯ ಮಗಳ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ.
ತಾಯಿ ಹಾಗೂ ಮಗಳು ಇಬ್ಬರೂ ತಮ್ಮ ಗುಂಪಿನ ಇತರ ಸದಸ್ಯರೊಂದಿಗೆ ಸಂತೋಷದಿಂದಿದ್ದಾರೆ ಎಂದು ಬ್ಲಾಗ್ ಹಾಗೂ ಫೇಸ್‌ಬುಕ್‌ಗಳಲ್ಲಿ ಕೊಲಂಬಸ್ ಪ್ರಾಣಿ ಸಂಗ್ರಹಾಲಯ ಹಾಗೂ ಅಕ್ವೇರಿಯಂ ಬರೆದುಕೊಂಡಿದೆ.
ಸುಲ್ಲಿಯಂತೆ ಭವಿಷ್ಯದಲ್ಲಿ ಗೊಂದಲ ಉಂಟಾಗದಿರಲೆಂದು, ಆಕೆಯ ನವಜಾತ ಮಗಳ ವೈದ್ಯಕೀಯ ಪರೀಕ್ಷೆ ನಡೆಸಿದ ಪ್ರಾಣಿ ಸಂಗ್ರಹಾಲಯದ ವೈದ್ಯಕೀಯ ಸಿಬ್ಬಂದಿ ಅದರ ಲಿಂಗವನ್ನು ಪತ್ತೆ ಮಾಡಿ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.