ಅಥೆನ್ಸ್ : ಗ್ರೀಕ್ ದ್ವೀಪ ರೋಡ್ಸ್ ಆವರಿಸಿರುವ ಕಾಳ್ಗಿಚ್ಚು 6 ದಿನಗಳಾದರೂ ತಹಬದಿಗೆ ಬಂದಿಲ್ಲ. ಈ ಮಧ್ಯೆ ದ್ವೀಪದಿಂದ 19 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇಷ್ಟು ಸಂಖ್ಯೆಯ ಜನರನ್ನು ಕಾಳ್ಗಿಚ್ಚಿನ ಕಾರಣಕ್ಕೆ ಸ್ಥಳಾಂತರ ಮಾಡಿದ್ದು, ದೇಶದಲ್ಲಿ ಇದೇ ಮೊದಲು ಎಂದು ಗ್ರೀಕ್‌ನ ‘ಹವಾಮಾನ ಬದಲಾವಣೆ ಮತ್ತು ನಾಗರಿಕ ಸುರಕ್ಷತೆ’ ಇಲಾಖೆ ತಿಳಿಸಿದೆ.
ರಸ್ತೆ ಮಾರ್ಗವಾಗಿ 16 ಸಾವಿರ ಹಾಗೂ 3 ಸಾವಿರ ಜನರನ್ನು ಹಡಗುಗಳ ಮೂಲಕ ಸ್ಥಳಾಂತರಿಸಲಾಗಿದೆ. 12 ಹಳ್ಳಿಗಳು ಮತ್ತು ಹಲವು ಹೋಟೆಲ್‌ಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಗ್ರೀಕ್‌ನ 266 ಅಗ್ನಿಶಾಮಕ ವಾಹನ, 10 ಹೆಲಿಕಾಪ್ಟರ್‌ಗಳನ್ನು ಬೆಂಕಿ ನಂದಿಸಲು ಬಳಸಿಕೊಳ್ಳಲಾಗಿದೆ. ನೂರಾರು ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ವಕ್ತಾರ ಯಾನ್ನಿಸ್ ಆರ್ಟೊಪಿಸ್ ತಿಳಿಸಿದರು.
ಐರೋಪ್ಯ ಒಕ್ಕೂಟದ 450 ಅಗ್ನಿಶಾಮಕ ವಾಹನಗಳು, 6 ವಿಮಾನಗಳು ಕಾಳ್ಗಿಚ್ಚು ನಿಯಂತ್ರಣಕ್ಕಾಗಿ ನಿಯೋಜನೆಗೊಂಡಿವೆ ಎಂದು ‘ಮಾನವೀಯ ನೆರವು ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಐರೋಪ್ಯ ಒಕ್ಕೂಟ’ದ ಆಯುಕ್ತ ಜಾನೆಜ್ ಲೆನಾರ್ಸಿಕ್ ಭಾನುವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.
ಪ್ಯಾಕೇಜ್ ಪ್ರವಾಸ ಸಂಸ್ಥೆಗಳಾದ ‘ಟಿಯುಐ’ ಮತ್ತು ‘ಜೆಟ್2’ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿವೆ. ಆದರೆ, ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ವಿಮಾನ ಕಳುಹಿಸುವುದಾಗಿ ‘ಜೆಟ್2’ ಘೋಷಿಸಿದೆ.
ದಾಖಲೆ ಪತ್ರಗಳನ್ನು ಕಳೆದುಕೊಂಡಿರುವ ಪ್ರವಾಸಿಗರ ನೆರವಿಗಾಗಿ ರೋಡ್ಸ್ ವಿಮಾನ ನಿಲ್ದಾಣದಲ್ಲಿ ನೆರವು ಕೇಂದ್ರ ಆರಂಭಿಸಲು ಸಿಬ್ಬಂದಿಯನ್ನು ಅಲ್ಲಿಗೆ ರವಾನಿಸಲಾಗುತ್ತಿದೆ ಎಂದು ಗ್ರೀಕ್‌ನ ವಿದೇಶಾಂಗ ಇಲಾಖೆ ತಿಳಿಸಿದೆ.
ಸ್ಥಳಾಂತರ ಕಾರ್ಯದ ಬಗ್ಗೆ ಜನ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ‘ಅಧಿಕಾರಿಗಳು ಅವಸರದಲ್ಲಿ ಜನರನ್ನು ಬೇರೆಡೆಗೆ ಸಾಗಿಸುತ್ತಿದ್ದಾರೆ. ಇದರಿಂದ ಗೊಂದಲ ಉಂಟಾಗಿದೆ’ ಎಂದು ಟ್ರಾವಲ್ ಏಜೆಂಟ್ ಸ್ಟೆಲಿಯೊಸ್ ಕೊಟ್ಯಡಿಸ್ ಹೇಳಿದ್ದಾರೆ.
ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಟ್ರಾವೆಲ್ ಏಜೆಂಟರುಗಳು ಬಸ್ ವ್ಯವಸ್ಥೆ ಮಾಡುತ್ತಿದ್ದಾರೆ. 50 ಆಸನದ ಬಸ್‌ಗಳಲ್ಲಿ 80–90ಜನರನ್ನು ತುಂಬಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.