ಕಾಬೂಲ್: ಅಫ್ಗನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಬೆಳಿಗ್ಗೆ ತಾಲಿಬಾನ್ ವಾಹನವೊಂದರ ಮೇಲೆ ಗ್ರೆನೇಡ್‌ವೊಂದನ್ನು ಎಸೆಯಲಾಗಿದ್ದು ಇಬ್ಬರು ಹೋರಾಟಗಾರರು ಮತ್ತು ನಾಲ್ಕು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
‘ದೇಹ್ ಮಜಾಂಗ್‌ನಲ್ಲಿ ಮುಜಾಹಿದ್ದೀನ್ ವಾಹನವೊಂದರ ಮೇಲೆ ಗ್ರೆನೇಡ್‌ವೊಂದನ್ನು ಎಸೆಯಲಾಗಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ’ ಎಂದು ತಾಲಿಬಾನ್ ಗೃಹ ಸಚಿವಾಲಯದ ವಕ್ತಾರ ಕರಿ ಸೈಯದ್ ಖೋಸ್ತಿ ಎಎಫ್‌ಪಿಗೆ ತಿಳಿಸಿದರು.
ರಾಜಧಾನಿಯ ಪಶ್ಚಿಮದಲ್ಲಿರುವ ದೇಹ್ ಮಜಾಂಗ್ ಜಿಲ್ಲೆಯಲ್ಲಿ ಜನ ಸಂದಣಿ ಇದ್ದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ನಾನು ಕೆಲಸಕ್ಕೆ ಹೋಗುತ್ತಿದ್ದೆ, ಆಗ ಸಮಯ ಬೆಳಿಗ್ಗೆ 7.55 ಆಗಿತ್ತು. ಈ ವೇಳೆ ರಸ್ತೆಯಲ್ಲಿ ದೊಡ್ಡ ಸ್ಫೋಟದ ಸದ್ದು ನನಗೆ ಕೇಳಿಸಿತು. ನಾನು ಅಲ್ಲಿಂದ ಪಾರಾದೆ’ ಎಂದು ಅಮಿನ್ ಅಮಾನಿ ಘಟನೆಯನ್ನು ವಿವರಿಸಿದರು.
‘ಸ್ಫೋಟದಿಂದ ಸಾಕಷ್ಟು ಹೊಗೆ ಬರುತ್ತಿರುವುದನ್ನು ಕಾರಿನ ಕನ್ನಡಿಯಲ್ಲಿ ನೋಡಿದೆ. ಈ ವೇಳೆ ಅನೇಕ ಜನರು ಓಡುತ್ತಿರುವುದನ್ನು ನಾನು ಗಮನಿಸಿದೆ’ ಎಂದು 35 ವರ್ಷದ ಹಿರಿಯ ಅಧಿಕಾರಿ ಹೇಳಿದರು.
ಸ್ಫೋಟದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.