ಇಸ್ಲಾಮಾಬಾದ್:ಬಹರೇನ್ ರಾಜಾ ಹಮದ್ ಬಿನ್ ಇಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಮತ್ತು ಅಬುಧಾಬಿ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹೌಬರಾ ಬಸ್ಟರ್ಡ್ ಹಕ್ಕಿಗಳ ಬೇಟೆಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಇದು ಖಾಸಗಿ ಭೇಟಿಯಾಗಿದ್ದು ಜನವರಿ 22–24ರವರೆಗೆ ಪಾಕಿಸ್ತಾನದಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಡಾನ್ ವರದಿ ಮಾಡಿದೆ.
ಬಸ್ಟರ್ಡ್ಅಂತರರಾಷ್ಟ್ರೀಯವಾಗಿ ಸಂರಕ್ಷಿತ ಪಕ್ಷಿ ಪ್ರಭೇದವಾಗಿದ್ದು, ಇದನ್ನು ಬೇಟೆಯಾಡುವುದನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗಿದೆ. ಆದಾಗ್ಯೂ ತೈಲ ರಾಷ್ಟ್ರಗಳನ್ನು ಮೆಚ್ಚಿಸುವ ಸಲುವಾಗಿ ಇವುಗಳ ಬೇಟೆಗೆ ವಿಶೇಷ ಅನುಮತಿ ನೀಡಲಾಗಿದೆ.
ಈ ಹಿಂದೆ 10 ವರ್ಷದ ಬಾಲಕ ಅಹ್ಮೆದ್ ಹಸನ್ ಎಂಬಾತ, ಅಳಿವಿನಂಚಿನಲ್ಲಿರುವ ಫಾಲ್ಕನ್ ಮತ್ತು ಇತರ ಜೀವಿಗಳನ್ನು ಬೇಟೆಯಾಡುವುದನ್ನು ನಿಷೇಧಿಸುವಂತೆ ಕೋರಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ.
ಹೌಬರಾ ಬಸ್ಟರ್ಡ್ ಅನ್ನು ಪ್ರಕೃತಿ ಸಂರಕ್ಷಣೆಗಾಗಿನ ಅಂತರರಾಷ್ಟ್ರೀಯ ಒಕ್ಕೂಟ (ಐಯುಸಿಎನ್) ಗುರುತಿಸಿರುವ ‘ದುರ್ಬಲ ಜೀವಿ’ ಪಟ್ಟಿಯಲ್ಲಿದೆ. ಇದರರ್ಥ ಈ ಇವು ಅಳಿವಿನಂಚಿನಲ್ಲಿವೆ.ನೈಸರ್ಗಿಕ ಆವಾಸಸ್ಥಾನದ ಅವನತಿ ಮತ್ತು ಅನಿಯಂತ್ರಿತ ಬೇಟೆ ಇವುಗಳ ಅವನತಿಗೆ ಮುಖ್ಯ ಕಾರಣ.
ಹೆಚ್ಚು ಹಣ ಪಾವತಿಸಿದರೆ ಪಾಕಿಸ್ತಾನದಲ್ಲಿ ಮಾರ್ಕೋರ್ ಮತ್ತು ಐಬೆಕ್ಸ್ ಪ್ರಾಣಿಗಳ ಬೇಟೆಗೂ ಅವಕಾಶ ನೀಡಲಾಗುತ್ತದೆ. ಮಾರ್ಕೋರ್ ಪಾಕಿಸ್ತಾನದ ರಾಷ್ಟ್ರೀಯ ಪ್ರಾಣಿ ಎಂಬುದು ವಿಪರ್ಯಾಸ.
ಹೌಬರಾ ಬಸ್ಟರ್ಡ್ ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಪರಿಗಣಿಸಿ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಪ್ಪಂದಗಳ ಅಡಿಯಲ್ಲಿ ಸಂರಕ್ಷಿಸಲಾಗಿದೆ. ಇಷ್ಟು ಮಾತ್ರವಲ್ಲದೆ ವನ್ಯಜೀವಿ ಸಂರಕ್ಷಣಾ ಕಾನೂನಿನಡಿಯಲ್ಲಿ ಇವುಗಳ ಬೇಟೆಯನ್ನೂ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.