ADVERTISEMENT

ಎಚ್‌–1ಬಿ ವೀಸಾ: ಅಮೆರಿಕ ವಿ.ವಿಗಳಲ್ಲಿ ಉನ್ನತ ಪದವಿ ಪಡೆದವರಿಗೆ ಆದ್ಯತೆ

ಏ.1ರಿಂದ ಹೊಸ ನಿಯಮ ಜಾರಿ

ಪಿಟಿಐ
Published 31 ಜನವರಿ 2019, 20:24 IST
Last Updated 31 ಜನವರಿ 2019, 20:24 IST
.
.   

ವಾಷಿಂಗ್ಟನ್‌: ಎಚ್‌–1ಬಿ ವೀಸಾ ನೀಡುವಾಗ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ. ಈ ಸಂಬಂಧ ರೂಪಿಸಿರುವಹೊಸ ನಿಯಮಾವಳಿಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ.

ಈ ನಿಯಮಾವಳಿಯಿಂದಾಗಿ, ಭಾರತ, ಚೀನಾದಲ್ಲಿ ಉನ್ನತ ಶಿಕ್ಷಣ ಪಡೆದ ವೃತ್ತಿಪರರ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಎಚ್‌–1ಬಿ ವೀಸಾ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರಲ್ಲಿ ಜನಪ್ರಿಯತೆ ಹೊಂದಿದೆ. ವಿಶೇಷ ವೃತ್ತಿಗಳಿಗೆ ತಾಂತ್ರಿಕ ಪರಿಣತಿ ಹೊಂದಿರುವ ವಿದೇಶಿಯರನ್ನು ನೇಮಿಸಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಈ ವೀಸಾ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಕೇಂದ್ರವು(ಯುಎಸ್‌ಸಿಐಎಸ್‌) ಎಚ್‌–1ಬಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿದ್ಯುನ್ಮಾನ ನೋಂದಣಿ ವ್ಯವಸ್ಥೆಯನ್ನು ಸಹ ರೂಪಿಸಲಾಗಿದೆ.

‘ವಲಸೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಚ್‌–1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಇದರಿಂದ ಅಮೆರಿಕ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಅಥವಾ ಉನ್ನತ ಪದವಿ ಹೊಂದಿದವರನ್ನು ಆಯ್ಕೆ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳಿಗೂ ಅನುಕೂಲವಾಗುತ್ತದೆ’ ಎಂದು ಯುಎಸ್‌ಸಿಐಎಸ್‌ನ ನಿರ್ದೇಶಕರಾದ ಫ್ರಾನ್ಸಿಸ್‌ ಸಿಸ್ಸ್ನಾ ತಿಳಿಸಿದ್ದಾರೆ.

‘2020ನೇ ಹಣಕಾಸು ವರ್ಷಕ್ಕೆ ಯುಎಸ್‌ಸಿಐಎಸ್‌ ಇದೇ ವರ್ಷದ ಏಪ್ರಿಲ್‌ 1ರಿಂದ ಎಚ್‌–1ಬಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸುತ್ತದೆ’ ಎಂದು ಫ್ರ್ಯಾನ್ಸಿಸ್‌ ತಿಳಿಸಿದ್ದಾರೆ.

ಎಚ್–1ಬಿ ವೀಸಾ ಮೂರು ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಅವಧಿ ಮುಗಿದ ಬಳಿಕ ಮತ್ತೆ ಮೂರು ವರ್ಷಗಳಿಗೆ ನವೀಕರಣಗೊಳಿಸಿಕೊಳ್ಳಲು ಅವಕಾಶವಿದೆ.

ಪ್ರತಿ ವರ್ಷ 65 ಸಾವಿರ ಮಂದಿಗೆ ಎಚ್‌–1ಬಿ ವೀಸಾ ನೀಡುವುದನ್ನು ಸೀಮಿತಗೊಳಿಸಲಾಗಿದೆ. ಇವರ ಜತೆಗೆ ಅಮೆರಿಕದ ಶಿಕ್ಷಣ ಸಂಸ್ಥೆಗಳಿಂದ ಉನ್ನತ ಪದವಿ ಪಡೆದ 20 ಸಾವಿರ ಮಂದಿಗೂ ವೀಸಾ ನೀಡಲಾಗುತ್ತದೆ. ಬೇಡಿಕೆ ಹೆಚ್ಚಾದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಕ್ರಮ ವಾಸಕ್ಕೆ ಅವಕಾಶ; 8 ಮಂದಿ ಬಂಧನ

ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸಲು ಸುಮಾರು 600 ವಿದೇಶಿಯರಿಗೆ ನೆರವು ನೀಡಿದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. 600 ಮಂದಿಯಲ್ಲಿ ಭಾರತೀಯರೂ ಸೇರಿದ್ದಾರೆ. ಇವರೆಲ್ಲರನ್ನು ಗಡಿಪಾರು ಮಾಡಲು ಅಮೆರಿಕ ಮುಂದಾಗಿದೆ.

ಬಂಧಿತರಲ್ಲಿ ಭಾರತೀಯರು ಮತ್ತು ಭಾರತೀಯ ಅಮೆರಿಕನ್ನರು ಸೇರಿದ್ದಾರೆ. ಆರೋಪಿಗಳು, ಫಾರ್ಮಿಂಗ್ಟನ್‌ ಹಿಲ್ಸ್‌ನ ನಕಲಿ ವಿಶ್ವವಿದ್ಯಾಲಯದಲ್ಲಿ ವಿದೇಶಿಯರ ಹೆಸರನ್ನು ನೋಂದಾಯಿಸುವ ಮೂಲಕ ಅಮೆರಿಕದಲ್ಲಿ ವಾಸಿಸುವ ಅವಕಾಶ ಕಲ್ಪಿಸಿಕೊಡುತ್ತಿದ್ದರು.

ಭರತ್‌ ಕಾಕಿರೆಡ್ಡಿ, ಸುರೇಶ್‌ ಕಂಡಾಲಾ, ಫನಿದೀಪ್‌ ಕರ್ಣತಿ, ಪ್ರೇಮ್‌ ರಾಮಪೀಸಾ, ಸಂತೋಷ್‌ ಸಮಾ, ಅವಿನಾಶ್‌ ಥಕ್ಕಲ್ಲಪಲ್ಲಿ, ಅಶ್ವನಾಥ್‌ ನುಣೆ ಮತ್ತು ನವೀಣ್‌ ಪ್ರತಿಪಾಟಿ ಬಂಧಿತ ಆರೋಪಿಗಳು.

ವಲಸೆ ಮತ್ತು ಸುಂಕ ಜಾರಿ ಇಲಾಖೆಯ ಅಧಿಕಾರಿಗಳು ಈ ಜಾಲವನ್ನು ಪತ್ತೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.