ಗಾಜಾ/ಜೆರುಸೆಲಂ: ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ 13 ಇಸ್ರೇಲಿ ಮತ್ತು 4 ಥಾಯ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಈ ಮೂಲಕ ಒಟ್ಟು 17 ಮಂದಿ ಒತ್ತೆಯಾಳುಗಳು ಭಾನುವಾರ ತಮ್ಮ ಕುಟುಂಬ ಸೇರಿಕೊಂಡವು.
ಶನಿವಾರ ತಡರಾತ್ರಿ ಹಮಾಸ್, ಒತ್ತೆಯಾಳುಗಳನ್ನು ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್‌ಗೆ (ICRC) ಹಸ್ತಾಂತರಿಸುತ್ತಿದ್ದಂತೆ, ಬಿಡುಗಡೆಗೊಂಡ ಜನರು ಗಾಜಾವನ್ನು ತೊರೆದು ರಫಾ ಗಡಿ ದಾಟುವ ಈಜಿಪ್ಟ್ ಭಾಗದ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಬಿಡುಗಡೆಯಾದ 13 ಇಸ್ರೇಲಿಗಳಲ್ಲಿ ಆರು ಮಹಿಳೆಯರು ಮತ್ತು ಏಳು ಮಕ್ಕಳು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
ಹಮಾಸ್ ಹಾಗೂ ಇಸ್ರೇಲ್ ನಡುವಿನ ಈ ಒಪ್ಪಂದದನ್ವಯ 3 ಹಾಗೂ 1ರ ಅನುಪಾತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಹಂತ, ಹಂತವಾಗಿ ಹಮಾಸ್ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.