ADVERTISEMENT

ಇಸ್ರೇಲ್‌ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ: ಹಮಾಸ್

ರಾಯಿಟರ್ಸ್
Published 7 ಜುಲೈ 2024, 12:52 IST
Last Updated 7 ಜುಲೈ 2024, 12:52 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಕೈರೊ: ಗಾಜಾದಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಇಸ್ರೇಲ್‌ನ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಹಮಾಸ್‌ನ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ. 

ಇಸ್ರೇಲ್‌–ಹಮಾಸ್‌ ಯುದ್ಧ ಕೊನೆಗೊಳಿಸಲು ಅಮೆರಿಕವು ಮುಂದಿಟ್ಟಿದ್ದ ಕದನ ವಿರಾಮ ಪ್ರಸ್ತಾವದಲ್ಲಿದ್ದ ಕೆಲವು ಪ್ರಮುಖ ಅಂಶಗಳನ್ನು ಹಮಾಸ್‌ ಕಳೆದ ವಾರ ಒಪ್ಪಿಕೊಂಡಿತ್ತು.  

ADVERTISEMENT

‘ಕದನ ವಿರಾಮಕ್ಕೆ ಸಂಬಂಧಿಸಿದಂತೆ ನಮ್ಮ ಅಭಿಪ್ರಾಯವನ್ನು ಮಧ್ಯಸ್ಥಗಾರರಿಗೆ ತಿಳಿಸಿದ್ದೇವೆ. ಇಸ್ರೇಲ್‌ನ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ’ ಎಂದು ಹಮಾಸ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ಕದನ ವಿರಾಮಕ್ಕೆ ಸಂಬಂಧಿಸಿದ ಮೂರು ಹಂತದ ಯೋಜನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಮೇ ತಿಂಗಳ ಕೊನೆಯಲ್ಲಿ ಮುಂದಿಟ್ಟಿದ್ದರು. ಇದಕ್ಕೆ ಕತಾರ್‌ ಮತ್ತು ಈಜಿಪ್ಟ್‌ ದೇಶಗಳು ಮಧ್ಯಸ್ಥಿಕೆ ವಹಿಸಿವೆ. ಯುದ್ಧವನ್ನು ಕೊನೆಗಳಿಸುವ ಮತ್ತು ಹಮಾಸ್‌ ವಶದಲ್ಲಿರುವ 120 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಗುರಿಯನ್ನು ಈ ಪ್ರಸ್ತಾವ ಹೊಂದಿದೆ.

ಕದನ ವಿರಾಮ ಪ್ರಸ್ತಾವದ ಕುರಿತು ಇಸ್ರೇಲ್‌ – ಕತಾರ್‌ ನಡುವೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹಮಾಸ್‌ನ ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ‘ಹಮಾಸ್‌ ನೀಡಿರುವ ಪ್ರತಿಕ್ರಿಯೆ ಸಂಬಂಧ ಕತಾರ್‌ನ ಪ್ರತಿನಿಧಿಗಳು ಇಸ್ರೇಲ್‌ ಜತೆ ಚರ್ಚಿಸಿದ್ದಾರೆ. ಇಸ್ರೇಲ್‌ನ ಪ್ರತಿಕ್ರಿಯೆಯನ್ನು ಒಂದೆರಡು ದಿನಗಳಲ್ಲಿ ನಮಗೆ ತಿಳಿಸುವ ಭರವಸೆ ಕೊಟ್ಟಿದ್ದಾರೆ’ ಎಂದರು. 

ಇಸ್ರೇಲ್‌ನಲ್ಲಿ ಮುಂದುವರಿದ ಪ್ರತಿಭಟನೆ: ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಭಾನುವಾರ ಇಸ್ರೇಲ್‌ನ ವಿವಿಧೆಡೆ ಪ್ರತಿಭಟನೆ ನಡೆಯಿತು. ಪ್ರಮುಖ ನಗರಗಳಲ್ಲಿ ಬೀದಿಗಿಳಿದ ಜನರು, ರಸ್ತೆ ತಡೆ ನಡೆಸಿದರು. ರಾಜಕಾರಣಿಗಳ ಮನೆಗಳ ಮುಂದೆ ಕೆಲಹೊತ್ತು ಧರಣಿ ಕುಳಿತರು. ಟೆಲ್‌ ಅವೀವ್– ಜೆರುಸಲೇಂ ಹೆದ್ದಾರಿಯಲ್ಲಿ ಟೈರ್‌ಗಳನ್ನು ಹೊತ್ತಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.