ವಾಷಿಂಗ್ಟನ್: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಒಂದೇ ವಾರದಲ್ಲಿ 200 ಮಿಲಿಯನ್ ಡಾಲರ್ (₹1,674 ಕೋಟಿ) ದೇಣಿಗೆ ಸಂಗ್ರಹಿಸಲಾಗಿದೆ ಎಂದು ಅವರ ಪ್ರಚಾರ ತಂಡವು ಭಾನುವಾರ ತಿಳಿಸಿದೆ. ಇದು ಅವರ ಪರವಾಗಿ ಹೆಚ್ಚುತ್ತಿರುವ ಬೆಂಬಲವನ್ನು ಪ್ರತಿಬಿಂಬಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
’ನವೆಂಬರ್ 5ರ ಚುನಾವಣೆಗೆ ಹತ್ತಿರವಾಗುತ್ತಿದ್ದು, ಗೆಲುವಿನ ಸನಿಹದಲ್ಲಿದ್ದೇವೆ‘ ಎಂದು ಪ್ರಚಾರ ತಂಡವು ತಿಳಿಸಿದೆ.
ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ತನ್ನ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರನ್ನು ಸೂಚಿಸುತ್ತೇನೆ ಎಂದು ಇದೇ ಜುಲೈ 20ರಂದು ಘೋಷಿಸಿದ್ದರು. ಅಮೆರಿಕದ ಉಪಾಧ್ಯಕ್ಷೆಯಾಗಿರುವ 59 ವರ್ಷದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಿದೆ.
‘ಬೈಡನ್ ಅನುಮೋದನೆ ನಂತರ ಕಮಲಾ ಹ್ಯಾರಿಸ್ ಪರ 200 ಮಿಲಿಯನ್ ಡಾಲರ್ ಸಂಗ್ರಹಿಸಲಾಗಿದೆ. ಇದೊಂದು ದಾಖಲೆ ಮಟ್ಟದ ದೇಣಿಗೆ ಸಂಗ್ರಹವಾಗಿದ್ದು, ಈ ಪೈಕಿ ಶೇ 66ರಷ್ಟು ಮಂದಿ ಮೊದಲ ಬಾರಿಗೆ ದೇಣಿಗೆ ನೀಡಿದ್ದಾರೆ. ಆ ಮೂಲಕ ತಳಮಟ್ಟದಲ್ಲಿ ಉಪಾಧ್ಯಕ್ಷೆ ಹ್ಯಾರಿಸ್ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ’ ಎಂದು ಹ್ಯಾರಿಸ್ ಅವರ ಸಂವಹನ ನಿರ್ದೇಶಕ ಮೈಕೆಲ್ ಟೇಲರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.