ಸಿಂಗಪುರ: ಪಕ್ಕದ ಇಂಡೊನೇಷ್ಯಾದಲ್ಲಿ ಉಂಟಾದ ಕಾಳ್ಗಿಚ್ಚಿನ ತಾಪ ಪಕ್ಕದ ಸಿಂಗಪುರಕ್ಕೂ ತಟ್ಟಿದೆ. ಇದರ ಪರಿಣಾಮ ಸಿಂಗಪುರದಲ್ಲಿನ ಗಾಳಿಯ ಗುಣಮಟ್ಟ ಕುಸಿದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದ ಪೂರ್ವ ಹಾಗೂ ಕೇಂದ್ರ ಭಾಗದಲ್ಲಿನ ಮಾಲಿನ್ಯದ ಪ್ರಮಾಣ 100 ಮೀರಿದೆ. ಹೀಗಾಗಿ ದೀರ್ಘಕಾಲದವರೆಗೆ ಹೊರಗೆ ಇರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಪಕ್ಕದ ರಾಷ್ಟ್ರದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನಿಂದ ಹಾರುಬೂದಿ ಹಾಗೂ ಸುಟ್ಟು ಕರಕಲಾದ ಸಣ್ಣ ವಸ್ತುಗಳು ಗಾಳಿಯಲ್ಲಿ ಹಾರಿ ಬರುತ್ತಿರುವುದು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇಂಡೊನೇಷ್ಯಾದ ಸುಮಾತ್ರಾ ದ್ವೀಪದ ಬಳಿ 212 ಹಾಟ್‌ಸ್ಟಾಟ್‌ಗಳನ್ನು ಗುರುತಿಸಲಾಗಿದೆ. ಬುಧವಾರ ಇವುಗಳ ಸಂಖ್ಯೆ 15 ಇತ್ತು. ಗುರುವಾದ ಹೊತ್ತಿಗೆ 65ಕ್ಕೆ ಏರಿಕೆಯಾಗಿತ್ತು. ಗಾಳಿ ಬೀಸುವ ದಿಕ್ಕು ಬದಲಾಗಿದ್ದರಿಂದ ಸಿಂಗಪುರದ ಗಾಳಿಯ ಗುಣಮಟ್ಟ ಏರುಪೇರಾಗಿದೆ ಎಂದು ಸಿಂಗಪುರದ ರಾಷ್ಟ್ರೀಯ ಪರಿಸರ ಸಂಸ್ಥೆ ವರದಿ ಮಾಡಿದೆ.
ಕಾಳ್ಗಿಚ್ಚು ನಂದಿಸಲು ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಿಸುವ ಕಾರ್ಯವನ್ನು ಇಂಡೊನೇಷ್ಯಾ ಸರ್ಕಾರ ಕೈಗೊಂಡಿದೆ. ಜತೆಗೆ ಮೋಡ ಬಿತ್ತನೆ ಮೂಲಕವೂ ಮಳೆ ಸುರಿಸಿ ಬೆಂಕಿ ಆರಿಸುವ ಕೆಲಸ ಸಾಗುತ್ತಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ.
ಇಂಡೊನೇಷ್ಯಾದ ಬೆಂಕಿ ಆರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಕೆಲ ದಿನಗಳ ಹಿಂದೆ ಮಲೇಷ್ಯಾ ಆಗ್ರಹಪಡಿಸಿತ್ತು. 2015 ಹಾಗೂ 2019ರಲ್ಲೂ ಇಂಡೊನೇಷ್ಯಾದಲ್ಲಿ ಇಂಥದ್ದೇ ಕಾಳ್ಗಿಚ್ಚು ಸಂಭವಿಸಿ ಲಕ್ಷಾಂತರ ಹೆಕ್ಟೇರ್ ಕಾಡು ನಾಶವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.