ADVERTISEMENT

50 ಹಮಾಸ್‌ ಬಂಡುಕೋರರ ಹತ್ಯೆ: ಇಸ್ರೇಲ್

ಗಾಜಾದ ದೊಡ್ಡ ಆಸ್ಪತ್ರೆ ಸುತ್ತಮುತ್ತ ಭಾರಿ ಗುಂಡಿನ ಕಾಳಗ

ಏಜೆನ್ಸೀಸ್
Published 20 ಮಾರ್ಚ್ 2024, 12:56 IST
Last Updated 20 ಮಾರ್ಚ್ 2024, 12:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಫಾ(ಗಾಜಾ ಪಟ್ಟಿ): ಗಾಜಾ ಪಟ್ಟಿಯ ದೊಡ್ಡ ಆಸ್ಪತ್ರೆಯಾದ ಶಿಫಾ ವೈದ್ಯಕೀಯ ಸಂಕೀರ್ಣದ ಬಳಿ ಹಾಗೂ ಸುತ್ತಮುತ್ತ ಇಸ್ರೇಲ್‌ ಪಡೆಗಳು ಮಂಗಳವಾರವೂ ಭಾರಿ ದಾಳಿ ನಡೆಸಿವೆ.

ಆಸ್ಪತ್ರೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹಮಾಸ್‌ ಸಂಘಟನೆಯ 50 ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಪಡೆಗಳು ಹೇಳಿವೆ.  

ಇಸ್ರೇಲ್‌ ನಡೆಸಿದ ದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಮಾಸ್‌ ಮಾಧ್ಯಮ ಕಚೇರಿ ಹೇಳಿದೆ.

ADVERTISEMENT

ಆದರೆ, ಈ ಗುಂಡಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದು ದೃಢಪಟ್ಟಿಲ್ಲ ಎಂದು ಅಸೋಸಿಯೇಟೆಡ್‌ ಪ್ರೆಸ್ (ಎಪಿ) ಹೇಳಿದೆ.

ನವೆಂಬರ್‌ನಲ್ಲಿ ಇಸ್ರೇಲ್‌ ಪಡೆಗಳು ನಡೆಸಿದ್ದ ಭೀಕರ ದಾಳಿಯಿಂದಾಗಿ ಭಾರಿ ಹಾನಿಗೆ ಒಳಗಾಗಿರುವ ಶಿಫಾ ಆಸ್ಪತ್ರೆಯು ಸದ್ಯ ಭಾಗಶಃ ಕಾರ್ಯಾಚರಣೆ ನಡೆಸುತ್ತಿದೆ. ಈ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್‌ ಪಡೆಗಳು ಈಗ ದಾಳಿ ನಡೆಸಿದ್ದರಿಂದ, ಸಾವಿರಾರು ಪ್ಯಾಲೆಸ್ಟೀನಿಯನ್ ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ವಲಸಿಗರು ಸಿಲುಕಿ, ತೊಂದರೆ ಅನುಭವಿಸುತ್ತಿದ್ದಾರೆ.

ಈ ದಾಳಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್‌ ಪಡೆಗಳು, ‘ಶಿಫಾ ಆಸ್ಪತ್ರೆಯಲ್ಲಿ ಹಮಾಸ್‌ ಬಂಡುಕೋರರು ಅಡಗಿದ್ದು, ಅಲ್ಲಿದ್ದುಕೊಂಡೇ ಅವರು ಇಸ್ರೇಲ್‌ ಮೇಲೆ ದಾಳಿಗೆ ನಿರ್ದೇಶನ ನೀಡುತ್ತಿದ್ದರು. ಈ ಕಾರಣಕ್ಕೆ, ಶಿಫಾ ಆಸ್ಪತ್ರೆ ಗುರಿಯಾಗಿಸಿ ಸೋಮವಾರ ಬೆಳಿಗ್ಗೆ ದಾಳಿ ನಡೆಸಲಾಗಿತ್ತು’ ಎಂದು ಹೇಳಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಭಾನುವಾರ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, ‘ರಫಾ ಮೇಲೆ ದಾಳಿ ನಡೆಸುವುದು ಬೇಡ. ನಿರ್ದಿಷ್ಟವಾಗಿ ಹಮಾಸ್‌ ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಲು ಪರ್ಯಾಯ ವಿಧಾನ ಕಂಡುಕೊಳ್ಳುವಂತೆ’ ಒತ್ತಾಯಿಸಿದ್ದರು.

ರಫಾ ಮೇಲಿನ ದಾಳಿ ಕುರಿತು ಚರ್ಚಿಸಲು ಇಸ್ರೇಲ್‌ ಅಧಿಕಾರಿಗಳನ್ನು ಒಳಗೊಂಡ ತಂಡವೊಂದನ್ನು ಕಳುಹಿಸಲು ನೆತನ್ಯಾಹು ಒಪ್ಪಿದ್ದರು.  

ಮಂಗಳವಾರ ಅರೆಸೇನಾ ಪಡೆ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು,‘ಬೈಡನ್‌ ಅವರ ಮೇಲಿನ ಗೌರವದ ಕಾರಣದಿಂದಾಗಿ ಅಮೆರಿಕ ಮುಂದಿಟ್ಟಿರುವ ಸಲಹೆಗಳನ್ನು ಆಲಿಸುತ್ತೇನೆ. ಆದರೆ, ರಫಾದಲ್ಲಿರುವ ಹಮಾಸ್‌ ತುಕಡಿಗಳನ್ನು ಸಂಪೂರ್ಣ ನಾಶ ಮಾಡಲು ನಿಶ್ಚಯಿಸಲಾಗಿದೆ. ಇದಕ್ಕಾಗಿ, ಭೂ ಮಾರ್ಗದಿಂದ ದಾಳಿ ಮಾಡುವುದೊಂದೆ ನಮ್ಮ ಮುಂದಿರುವ ಮಾರ್ಗ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.