ಬೀಜಿಂಗ್: ಚೀನಾದ ಹುಬೈ ಪ್ರಾಂತ್ಯದ ಟೌನ್‌ಷಿಪ್‌ನಲ್ಲಿ ಸುರಿದ ಭಾರಿ ಮಳೆಗೆ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸುಕ್ಸಿಯಾನ್ ಕೌಂಟಿಯ ಲಿಯುಲಿನ್ ಟೌನ್‌ಶಿಪ್‌ನಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಮಳೆಯ ಪ್ರಮಾಣ 503 ಮಿಮೀ. ಪರಿಣಾಮವಾಗಿ ಜನವಸತಿ ಪ್ರದೇಶದಲ್ಲಿ ಸರಾಸರಿ 3.5 ಮೀಟರ್ ಆಳದಷ್ಟು ನೀರು ನಿಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೌನ್‌ಶಿಪ್‌ನಲ್ಲಿರುವ 8ಸಾವಿರ ಮಂದಿ ತೀವ್ರ ತೊಂದರೆಗೆ ಸಿಲುಕಿದ್ದಾರೆ. ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯ ಕೈಗೊಂಡಿವೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಚೀನಾದ ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ಗುರುವಾರ ಎಚ್ಚರಿಕೆ ನೀಡಿದ್ದು, ಈ ವಲಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಹುಬೈ, ಅನ್ಹುಯಿ, ಹುನಾನ್, ಜಿಯಾಂಕ್ಸಿ ಮತ್ತು ಝೆಜಿಯಾಂಗ್ ಪ್ರದೇಶಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಒಂದೇ ದಿನ 200 ಮಿ.ಮೀ ಮಳೆಯಾದ ವರದಿಯಾಗಿದೆ. ಚೀನಾದ ಐದು ಪ್ರಾಂತ್ಯಗಳಲ್ಲಿ ಸುಮಾರು ಗಂಟೆಗೆ 80 ಮಿಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.