ADVERTISEMENT

ಬ್ರಿಟನ್ ಪ್ರಧಾನಿಯಾದ ‘ಭಾರತೀಯ‘ ರಿಷಿ ಸುನಕ್ ಬಗ್ಗೆ ತಿಳಿಯ ಬೇಕಾದ ಕೆಲ ಸಂಗತಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2022, 14:00 IST
Last Updated 24 ಅಕ್ಟೋಬರ್ 2022, 14:00 IST
ಪತ್ನಿ ಅಕ್ಷತಾ, ಪುತ್ರಿಯರ ಜೊತೆ ರಿಷಿ ಸುನಕ್‌
ಪತ್ನಿ ಅಕ್ಷತಾ, ಪುತ್ರಿಯರ ಜೊತೆ ರಿಷಿ ಸುನಕ್‌   

ಲಂಡನ್:ಬ್ರಿಟನ್ ಯುವ ರಾಜಕಾರಣಿ ಹಾಗೂ ಭಾರತಮೂಲದ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್‌ಗೆ ಇದೀಗ ಇದೆ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಡಳಿತ ಮುನ್ನಡೆಸುವಂತಾಗಿದೆ.ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಒಟ್ಟು ಬಲದಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರಿಗೆ ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ.

ರಿಷಿ ಸುನಕ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಮಾಹಿತಿ ಇಲ್ಲಿದೆ...

ADVERTISEMENT

* ರಿಷಿ ಸುನಕ್ ಅವರು ಫೆಬ್ರುವರಿ 13, 2020ರಿಂದ ಬ್ರಿಟನ್ನಿನ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

* ಭಾರತದ ಪಂಜಾಬ್ ಮೂಲದ ಯಶ್ವೀರ್ ಮತ್ತು ಉಷಾ ಸುನಕ್ ದಂಪತಿಯ ಮಗ ರಿಷಿ ಸುನಕ್. ಬ್ರಿಟನ್ನಿನ ಸೌತಾಂಪ್ಟನ್‌ನಲ್ಲಿ ಜನಿಸಿದರು.

* ಕೊರೊನಾ ಸಾಂಕ್ರಾಮಿಕದ ಸಂದರ್ಭ ಬ್ರಿಟನ್ನಿನ ಉದ್ಯಮಗಳ ರಕ್ಷಣೆಗೆ 410 ಬಿಲಿಯನ್ ಪೌಂಡ್ ರಕ್ಷಣಾ ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ರಿಷಿ ಸುನಕ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು.

* ಇತ್ತೀಚಿನವರೆಗೂ ತಮ್ಮ ನಾಯಕತ್ವದ ಗುಣಗಳಿಂದಾಗಿ ರಿಷಿ ಸುನಕ್ ಭಾರೀ ಹೆಸರುವಾಸಿಯಾಗಿದ್ದರು.

* ಕೊರೊನಾ ಸಂದರ್ಭ ನಿವಾಸಿಗಳ ಮನೆ ನಿರ್ವಹಣೆಗೆ ಸಾಕಷ್ಟು ಹಣ ನೀಡದಿದ್ದಕ್ಕೆ ರಿಷಿ ಟೀಕೆಗೆ ಗುರಿಯಾಗಿದ್ದರು, ಲಾಕ್‌ಡೌನ್ ನಿಯಮ ಮೀರಿ ಬೋರಿಸ್ ಜಾನ್ಸನ್ ಜೊತೆ ಪಾರ್ಟಿ ಮಾಡಿದ್ದಕ್ಕಾಗಿ ದಂಡ ತೆರಬೇಕಾಯ್ತು.

* ತಮ್ಮ ಪತ್ನಿ ಅಕ್ಷತಾ ಮೂರ್ತಿ ವಿದೇಶಿ ವ್ಯವಹಾರದಲ್ಲಿ ಗಳಿಸಿದ ಲಾಭಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿಗೆ ತೆರಿಗೆ ಕಟ್ಟಿಲ್ಲವೆಂಬ ಆರೋಪಕ್ಕೆ ಸಂಬಂಧಿಸಿದಂತೆ ರಿಷಿ ತೀವ್ರ ಒತ್ತಡಕ್ಕೆ ಸಿಲುಕಿದ್ದರು.

* ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್, ಮೇ 2015ರಂದು ರಿಚ್‌ಮಂಡ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

* ತೆರೆಸಾ ಮೆ ಅವರ ಬ್ರೆಕ್ಸಿಟ್ ಒಪ್ಪಂದ ಹಿಂಪಡೆಯುವುದರ ಪರವಾಗಿ ಮೂರು ಭಾರಿ ಮತ ಹಾಕಿದ್ದರು. ತೆರೆಸಾ ರಾಜೀನಾಮೆ ಬಳಿಕ ಬೋರಿಸ್ ಅವರಿಗೆ ಬೆಂಬಲ ನೀಡಿದರು.

* ರಾಜಕೀಯ ಪ್ರವೇಶಕ್ಕೂ ಮುನ್ನ ಪ್ರಮುಖ ಬ್ಯಾಂಕ್‌ವೊಂದರಲ್ಲಿ ವಿಶ್ಲೇಷಕರಾಗಿ ಸುನಕ್ ಕೆಲಸ ಮಾಡಿದ್ದರು.

* ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದ ರಿಷಿ ಸುನಕ್, ಆಗಸ್ಟ್, 2009ರಲ್ಲಿ ವಿವಾಹವಾಗಿದ್ದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.