ಬೈರೂತ್/ಜೆರುಸಲೇಂ: ಇಸ್ರೇಲ್ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿರುವ ಹಿಜ್ಬುಲ್ಲಾ ಸಂಘಟನೆಯ ಉಪ ಮಹಾ ಕಾರ್ಯದರ್ಶಿ ನಯೀಂ ಕಾಸಿಂ, ಸುದೀರ್ಘ ಅವಧಿಯ ಯುದ್ಧಕ್ಕೆ ಸಿದ್ಧವಾಗಿರುವುದಾಗಿ ಹೇಳಿದ್ದಾರೆ.
ಇಸ್ರೇಲ್ ಸೇನೆಯು ಕಳೆದ 10 ದಿನಗಳಲ್ಲಿ ನಡೆಸಿದ ದಾಳಿಗಳಲ್ಲಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ ಮತ್ತು ಆರು ಮಂದಿ ಪ್ರಮುಖರು ಹತ್ಯೆಗೀಡಾಗಿದ್ದಾರೆ. ಇಸ್ರೇಲ್ ಸೇನೆಯು ಭೂದಾಳಿ ನಡೆಸಿದರೆ ಲೆಬನಾನ್ ರಕ್ಷಣೆಗೆ ಹಿಜ್ಬುಲ್ಲಾ ಹೋರಾಟಗಾರರು ಸಜ್ಜಾಗಿದ್ದಾರೆ ಎಂದು ಕಾಸಿಂ ಹೇಳಿದ್ದಾರೆ.
ನಸ್ರಲ್ಲಾ ಅವರ ಸ್ಥಾನಕ್ಕೆ ಹಿಜ್ಬುಲ್ಲಾ ಸಂಘಟನೆಯು ಇನ್ನೊಬ್ಬರನ್ನು ನೇಮಕ ಮಾಡುವವರೆಗೆ ಕಾಸಿಂ ಅವರು ಸಂಘಟನೆಯ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ಕಮಾಂಡರ್‌ಗಳ ಹತ್ಯೆ ಆಗಿದ್ದರೂ ಸಂಘಟನೆಯು ಹೊಸ ಕಮಾಂಡರ್‌ಗಳನ್ನು ಈಗ ನೆಚ್ಚಿಕೊಂಡಿದೆ ಎಂದು ಕಾಸಿಂ ತಿಳಿಸಿದ್ದಾರೆ.
‘ನಮ್ಮ ಮಿಲಿಟರಿ ಸಾಮರ್ಥ್ಯದ ಮೇಲೆ ಪರಿಣಾಮ ಉಂಟುಮಾಡಲು ಇಸ್ರೇಲ್‌ಗೆ ಆಗಿಲ್ಲ’ ಎಂದು ಕೂಡ ಅವರು ಹೇಳಿದ್ದಾರೆ.
ಕಾಸಿಂ ಅವರು ಟಿ.ವಿ. ಮೂಲಕ ಮಾತನಾಡುವ ಮೊದಲು ಬೈರೂತ್‌ನ ಕೇಂದ್ರ ಭಾಗದ ಮೇಲೆ ನಡೆದ ದಾಳಿಯಿಂದಾಗಿ ಅಪಾರ್ಟ್‌ಮೆಂಟ್ ಕಟ್ಟಡವೊಂದು ನೆಲಸಮಗೊಂಡಿದ್ದು, ಮೂವರು ಪ್ಯಾಲೆಸ್ಟೀನ್ ಬಂಡುಕೋರರು ಹತರಾಗಿದ್ದಾರೆ. ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಬೈರೂತ್‌ನ ಕೇಂದ್ರ ಭಾಗದ ಮೇಲೆ ದಾಳಿ ನಡೆದಿರುವುದು ಇದೇ ಮೊದಲು.
ಸೋಮವಾರದ ದಾಳಿಗೆ ಇಸ್ರೇಲ್ ಹೊಣೆ ಹೊತ್ತುಕೊಂಡಿಲ್ಲ. ಆದರೂ, ಈ ದಾಳಿ ನಡೆಸಿದ್ದು ಇಸ್ರೇಲ್ ಎಂದು ನಂಬಲಾಗಿದೆ.
105 ಮಂದಿ ಸಾವು: ಭಾನುವಾರ ನಡೆದ ದಾಳಿಗಳಲ್ಲಿ ಒಟ್ಟು 105 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಬಂಡುಕೋರರನ್ನು ಮಾತ್ರ ಗುರಿಯಾಗಿಸಿಕೊಳ್ಳುವುದಾಗಿ ಇಸ್ರೇಲ್ ಹೇಳುತ್ತಿದೆ. ಆದರೆ ದಾಳಿಗಳಲ್ಲಿ ನಾಗರಿಕರು ಕೂಡ ಬಲಿಯಾಗಿದ್ದಾರೆ. ದಾಳಿಗಳಲ್ಲಿ ಬಲಿಯಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾದ ನಂತರದಲ್ಲಿ ನಡೆದ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡ ಪ್ಯಾಲೆಸ್ಟೀನ್ ನಾಗರಿಕರ ಸಂಖ್ಯೆ ಕನಿಷ್ಠ 41,595 ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ಲೆಬನಾನ್ ಮೇಲೆ ಇಸ್ರೇಲ್ ಸೋಮವಾರ ನಡೆಸಿದ ದಾಳಿಯಲ್ಲಿ ತನ್ನ ಕಮಾಂಡರ್ ಫತಾ ಶರೀಫ್ ಮೃತಪಟ್ಟಿದ್ದಾರೆ ಎಂದು ಹಮಾಸ್ ಬಂಡುಕೋರ ಸಂಘಟನೆ ತಿಳಿಸಿದೆ. ಅಲ್–ಬಸ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಶರೀಫ್ ಬಲಿಯಾಗಿದ್ದಾರೆ. ಅವರ ಪತ್ನಿ, ಮಗ ಮತ್ತು ಮಗಳು ಕೂಡ ಮೃತಪಟ್ಟಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಒಂದು ವಾರದಲ್ಲಿ ಹತ್ಯೆಯಾದ ಹಿಜ್ಬುಲ್ಲಾ ನಾಯಕರು ಹಸನ್ ನಸ್ರಲ್ಲಾ (ಸಂಘಟನೆಯ ಮುಖ್ಯಸ್ಥ) ಇಬ್ರಾಹಿಂ ಖುಬೈಸಿ (ಕಮಾಂಡರ್ ಹಾಗೂ ರಾಕೆಟ್ ವಿಭಾಗದ ಮುಖ್ಯಸ್ಥ) ಇಬ್ರಾಹಿಂ ಅಕೀಲ್ (ಕಾರ್ಯಾಚರಣೆ ವಿಭಾಗದ ಕಮಾಂಡರ್) ಫಾದ್ ಶುಕ್ರ್ (ಕಮಾಂಡರ್ ನಸ್ರಲ್ಲಾ ಅವರ ಆಪ್ತ) ನಬೀಲ್ ಕೌಕ್ (ಹಿಜ್ಬುಲ್ಲಾ ಕೇಂದ್ರ ಪರಿಷತ್ತಿನ ಉಪ ಮುಖ್ಯಸ್ಥ) ಅಹಮದ್ ವಾಹಬೆ (ರಾದ್ವಾನ್ ಪಡೆಯ ಕಮಾಂಡರ್) ಅಲಿ ಕರಾಕಿ (ಹಿಜ್ಬುಲ್ಲಾ ಪಡೆಯ ದಕ್ಷಿಣದ ಮುಖ್ಯಸ್ಥ) ಮೊಹಮ್ಮದ್ ಸುರೂರ್ (ಹಿಜ್ಬುಲ್ಲಾ ಡ್ರೋನ್ ಘಟಕದ ಮುಖ್ಯಸ್ಥ) ಈಗ ಇರುವ ಪ್ರಮುಖ ಕಮಾಂಡರ್‌ಗಳು ನಯೀಂ ಕಾಸಿಂ ಹಾಶಿಂ ಸಫೈದಿನ್ (ಇವರು ನಸ್ರಲ್ಲಾ ಅವರ ಸ್ಥಾನಕ್ಕೆ ಬರಲಿದ್ದಾರೆ ಎಂಬ ಮಾತು ಇದೆ) ತಲಾಲ್ ಹಮೀಹ್ ಅಬು ಅಲಿ ರೆದಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.