ವಾಷಿಂಗ್ಟನ್: ಅಲಾಸ್ಕಾದ ಉತ್ತರ ಕರಾವಳಿಯಲ್ಲಿ ಸುಮಾರು 40,000 ಅಡಿ ಎತ್ತರದಲ್ಲಿ ಪರಿಕರಗಳೊಂದಿಗೆ ಹಾರಾಟ ನಡೆಸುತ್ತಿದ್ದ ಸಣ್ಣ ಕಾರಿನ ಗಾತ್ರದ ವಸ್ತುವನ್ನು ಅಧ್ಯಕ್ಷ ಜೋ ಬೈಡನ್ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಫೈಟರ್ ಜೆಟ್‌ಗಳು ಶುಕ್ರವಾರ ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೆಂಟಗನ್ (ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ಮಾಧ್ಯಮ ಕಾರ್ಯದರ್ಶಿ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್, ‘ವಸ್ತುವಿನ ಮೂಲವು ಇಲ್ಲಿಯವರೆಗೆ ಗೊತ್ತಾಗಿಲ್ಲ. ಗುರುವಾರ ಅಮೆರಿಕದ ವಾಯುಪ್ರದೇಶದಲ್ಲಿ ಮೊದಲ ಬಾರಿಗೆ ಅದು ಪತ್ತೆಯಾಗಿತ್ತು. ನಾಗರಿಕ ವಿಮಾನ ಸಂಚಾರಕ್ಕೆ ಅದು ಬೆದರಿಕೆಯೊಡ್ಡುವ ಸಾಧ್ಯತೆಗಳಿದ್ದ ಕಾರಣಕ್ಕೆ ಹೊಡೆದುರುಳಿಸಲಾಗಿದೆ’ ಎಂದು ಅವರು ಹೇಳಿದರು.
‘ಅಮೆರಿಕದ ಉತ್ತರ ಕಮಾಂಡ್ ಈಗ ವಸ್ತುವಿನ ಪತ್ತೆ ಕಾರ್ಯ ಆರಂಭಿಸಿದೆ’ ಎಂದು ರೈಡರ್ ಹೇಳಿದರು. ಹಾರಾಡುತ್ತಿದ್ದ ವಸ್ತುವಿಗೆ ಎಫ್-22 ಫೈಟರ್ ಜೆಟ್ ಎಐಎಂ-9ಎಕ್ಸ್ ಕ್ಷಿಪಣಿಯನ್ನು ಗುರಿ ಮಾಡಿ ಹೊಡೆದಿತ್ತು ಎಂದು ಅಧಿಕಾರಿಗಳು ಹೇಳಿದರು.
ಅಟ್ಲಾಂಟಿಕ್ ಮಹಾಸಾಗರದ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ಒಂದು ವಾರದ ಒಳಗೇ ಈ ಘಟನೆ ನಡೆದಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.