ADVERTISEMENT

ಕಳಪೆ ಶಿಕ್ಷಣ: ಚಿಲಿಯಲ್ಲಿ ವಿದ್ಯಾರ್ಥಿಗಳ ಉಗ್ರ ಪ್ರತಿಭಟನೆ, ಪ್ರೌಢಶಾಲೆಗೆ ಬೆಂಕಿ

ಪಿಟಿಐ
Published 5 ಜುಲೈ 2022, 14:15 IST
Last Updated 5 ಜುಲೈ 2022, 14:15 IST
ಶಾಲೆ ಮುಂದೆ ಪೊಲಿಸ್ ಸರ್ಪಗಾವಲು: ರಾಯಿಟರ್ಸ್ ಚಿತ್ರ
ಶಾಲೆ ಮುಂದೆ ಪೊಲಿಸ್ ಸರ್ಪಗಾವಲು: ರಾಯಿಟರ್ಸ್ ಚಿತ್ರ   

ಸ್ಯಾಂಟಿಯಾಗೊ: ಕಳಪೆ ಶಿಕ್ಷಣ ವ್ಯವಸ್ಥೆ ಖಂಡಿಸಿ ಚಿಲಿ ದೇಶದ ಶಾಲಾ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ರಾಜಧಾನಿ ಸ್ಯಾಂಟಿಯಾಗೊದ ಶಾಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಒಂದು ಶಾಲೆಗೆ ಬೆಂಕಿ ಹಚ್ಚಿರುವ ವಿದ್ಯಾರ್ಥಿಗಳು ಪೊಲೀಸರ ಜೊತೆ ಘರ್ಷಣೆಗೆ ಇಳಿದಿದ್ದರು. ನಗರದ ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

ಪ್ರಾಂಶುಪಾಲರ ಕೊಠಡಿಗೆ ಬೆಂಕಿ ತೀವ್ರ ಹಿಂಸಾಚಾರ ನಡೆಸಿದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಪ್ರತಿಷ್ಠಿತ ಇಂಟರ್‌ನ್ಯಾಶನಲ್ ಇಂಟರ್ನಾಡೊ ನ್ಯಾಷನಲ್ ಬರೊಸ್ ಪ್ರೌಢಶಾಲೆಯನ್ನು ಮುಚ್ಚಲಾಗಿತ್ತು

ದೇಶ ಅಭಿವೃದ್ಧಿ ಹೊಂದುತ್ತಿದ್ದರೂ ಸಹ ದುಬಾರಿ ಮತ್ತು ಕಳಪೆ ಗುಣಮಟ್ಟದ ಶಾಲೆಗಳ ವ್ಯವಸ್ಥೆ ವಿರುದ್ಧ ರೊಚ್ಚಿಗೆದ್ದಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಕ್ಕಳ ಈ ಹಿಂಸಾತ್ಮಕ ನಡವಳಿಕೆಗೆ ಕೊರೊನಾ ಸಾಂಕ್ರಾಮಿಕದ ಪರಿಣಾಮವೂ ಇರಬಹುದು. ದೀರ್ಘಕಾಲದ ಲಾಕ್‌ಡೌನ್‌ನಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾ, ಬೀರಿರಬಹುದು ಎನ್ನುತ್ತಾರೆ ತಜ್ಞರು.

‘ಇಲ್ಲಿನಂತೆ ಮಕ್ಕಳ ವರ್ತನೆಯಲ್ಲಿ ತೀವ್ರ ಮತ್ತು ನಾಟಕೀಯ ಬದಲಾವಣೆಗಳನ್ನು ಬೇರೆ ಎಲ್ಲಿಯೂ ಕಂಡಿಲ್ಲ’ಎಂದು ಯುನಿಸೆಫ್‌ನ ಚಿಲಿ ಶಿಕ್ಷಣಾಧಿಕಾರಿ ಫ್ರಾನಿಸ್ಕಾ ಮೊರಾಲೆಸ್ ಹೇಳಿದ್ದಾರೆ.

ADVERTISEMENT

2018 ಮತ್ತು 2019ಕ್ಕೆ ಹೋಲಿಸಿದರೆ ಕಳೆದ ಸೆಮಿಸ್ಟರ್‌ನಲ್ಲಿ ಹಿಂಸಾಚಾರದ ಪ್ರಕರಣಗಳು ಶೇಕಡ 56ರಷ್ಟು ಹೆಚ್ಚಾಗಿವೆ. ಮಕ್ಕಳ ಹಿಂಸಾಚಾರ ಹೆಚ್ಚಳವು ಇಲ್ಲಿನ ರಾಜಕಾರಣಿಗಳು, ಶಿಕ್ಷಕರು ಮತ್ತು ಮಾನಸಿಕ ತಜ್ಞರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಚಿಲಿಯ ಶಿಕ್ಷಣ ವರಿಷ್ಟಾಧಿಕಾರಿ ಹೇಳಿದ್ದಾರೆ.

‘ಶ್ರದ್ಧೆಯಿಂದ ವಿದ್ಯೆ ಕಲಿಯಬೇಕಾದ ಮಕ್ಕಳು ಸಾಮಗ್ರಿಗಳಿಗೆ ಬೆಂಕಿ ಹಚ್ಚಿ ಪ್ರಾಂಶುಪಾಲರ ಮೇಲೆ ದಾಳಿ ನಡೆಸುತ್ತಿದ್ದರೆ ಶಾಲೆ ನಡೆಸುವುದು ಕಷ್ಟ’ ಎಂದು ಅವರು ಹೇಳುತ್ತಾರೆ.

ಇತಿಹಾಸವನ್ನು ಕೆದಕಿ ನೋಡಿದರೆ 1970–80 ದಶಕದಲ್ಲಿ ಆಗುಸ್ಟೊ ಪಿನೊಚೆಟ್ ಸರ್ವಾಧಿಕಾರ ಖಂಡಿಸಿ ವಿದ್ಯಾರ್ಥಿಗಳು ಉಗ್ರ ಪ್ರತಿಭಟನೆ ನಡೆಸಿದ್ದರು. 2006 ಮತ್ತು 2011ರ ನಡುವೆ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಒತ್ತಾಯಿಸಿ ಗೇಬ್ರಿಯಲ್ ಬೋರಿಕ್(ಹಾಲಿ ಚಿಲಿ ಅಧ್ಯಕ್ಷ) ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. 2019ರಲ್ಲಿ ಮೆಟ್ರೊ ನಿಲ್ದಾಣಗಳು ಮತ್ತು ಚರ್ಚ್‌ಗಳಿಗೆ ಬೆಂಕಿ ಸೇರಿದಂತೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು.

ಪ್ರತಿಭಟನಾಕಾರರಿಗೆ ತಮ್ಮ ಬೇಡಿಕೆ ಪೂರೈಸಿಕೊಳ್ಳಲು ಇರುವ ಏಕೈಕ ದಾರಿ ಇದಾಗಿದೆ ಎಂದು ವಿದ್ಯಾರ್ಥಿನಿ ಫ್ಲೊರೆನ್ಸಿಯಾ ಅಕೆವೆಡೊ ಹೇಳಿದ್ದಾರೆ. ಸೂಕ್ತವಾದ ಶೌಚಾಲಯ, ಪೀಠೋಪಕರಣ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸದಿದ್ದಾಗ ಇಂತಹ ಪ್ರತಿಭಟನೆ ಅನಿವಾರ್ಯ ಎಂದು ಅವರು ಹೇಳುತ್ತಾರೆ.

‘ಹಿರಿಯರು ನಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮ ಮಾತನ್ನು ಅವರು ಕೇಳಿಸಿಕೊಳ್ಳುತ್ತಿಲ್ಲ. ಹಾಗಾಗಿ, ಶಾಲೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದೇವೆ. ನಾವು ಹಿಂಸಾಚಾರ ನಡೆಸಿದರೆ ಮಾತ್ರ ನಮಗೆ ಬೇಕಾದದ್ದು ಸಿಗುತ್ತದೆ ’ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.