ವಾಷಿಂಗ್ಟನ್: ಹಿಮಾಲಯದಲ್ಲಿನ ನೀರ್ಗಲ್ಲುಗಳು ಕರಗುವ ಪ್ರಮಾಣ 2000ದಿಂದ ಈಚೆಗೆ ಮತ್ತಷ್ಟು ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದರಿಂದಾಗಿ ಭಾರತ ಸೇರಿದಂತೆ ಹಿಮಾಲಯದ ಸುತ್ತಲಿನ ರಾಷ್ಟ್ರಗಳಲ್ಲಿ ಮುಂಬರುವ ವರ್ಷಗಳಲ್ಲಿನೀರಿನ ಕೊರತೆ ಎದುರಾಗುವ ಭೀತಿ ಇದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
‘1975ರಿಂದ 2000ನೇ ಇಸವಿ ತನಕ ನೀರ್ಗಲ್ಲುಗಳು ಕರಗಿದ ಪ್ರಮಾಣಕ್ಕೆ ಹೋಲಿಸಿದರೆ 2000ನೇ ಇಸವಿಯಿಂದ ಈಚೆಗೆ ಈ ಪ್ರಮಾಣ ದುಪ್ಪಟ್ಟು ಹೆಚ್ಚಾಗುತ್ತಿದೆ ಎನ್ನುವುದು ಈ ಅಧ್ಯಯನದಿಂದ ಸ್ಪಷ್ಟವಾಗಿದೆ’ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಜೊಷುವಾ ಮೌರರ್ ಹೇಳಿದ್ದಾರೆ.
‘ಉಪಗ್ರಹಗಳ ಮೂಲಕ ಭಾರತ, ಚೀನಾ, ನೇಪಾಳ ಹಾಗೂ ಭೂತಾನ್‌ನಲ್ಲಿ 40 ವರ್ಷ ಸಮೀಕ್ಷೆ ನಡೆಸಲಾಗಿದ್ದು, ಹಿಮಾಲಯದ ನೀರ್ಗಲ್ಲುಗಳು ಹವಾಮಾನ ಬದಲಾವಣೆಯಿಂದಾಗಿ ಕರಗುತ್ತಿವೆ ಎನ್ನುವುದು ಇದರಿಂದ ತಿಳಿದುಬಂದಿದೆ’ ಎಂದು ಸಂಶೋಧಕರು ಹೇಳಿದ್ದಾರೆ.
‘ಸೈನ್ಸ್ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
ಪಶ್ಚಿಮದಿಂದ ಪೂರ್ವದವರೆಗಿನ 2,000 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿಉಪಗ್ರಹಗಳು ಸೆರೆಹಿಡಿದ, ಸುಮಾರು 650 ಚಿತ್ರಗಳನ್ನು ಸಂಶೋಧಕರುಅಧ್ಯಯನ ನಡೆಸಿದ್ದಾರೆ. ಇವುಗಳಲ್ಲಿ ಬಹುತೇಕ ಚಿತ್ರಗಳು ಅಮೆರಿಕದ ಗುಪ್ತಚರ ಉಪಗ್ರಹಗಳು ಈಚೆಗೆ ಸೆರೆಹಿಡಿದವು. 3ಡಿ ತಂತ್ರಜ್ಞಾನ ಬಳಸಿ ಈ ಚಿತ್ರಗಳನ್ನು ವೀಕ್ಷಿಸಿದಾಗ, ನೀರ್ಗಲ್ಲುಗಳ ಆಕಾರ ಹೇಗೆ ಬದಲಾಗುತ್ತಿವೆ ಎನ್ನುವುದು ತಿಳಿದುಬಂದಿದೆ.
ಅಂಕಿ– ಅಂಶಗಳು
* 0.25 ಮೀ. –1975ರಿಂದ 2000ದ ತನಕಪ್ರತಿವರ್ಷ ಕರಗಿದ ನೀರ್ಗಲ್ಲುಗಳ ಸರಾಸರಿ ಪ್ರಮಾಣ
*0.5 ಮೀ. –2000ದಿಂದ ಈಚೆ ವಾರ್ಷಿಕ ಕರಗಿದ ನೀರ್ಗಲ್ಲುಗಳ ಸರಾಸರಿ ಪ್ರಮಾಣ
*60,000 ಕೋಟಿ ಟನ್ –ಪ್ರಸ್ತುತ ಹಿಮಾಲಯದಲ್ಲಿ ಇರುವ ನೀರ್ಗಲ್ಲುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.