ಕಠ್ಮಂಡು: ಹಿಮಾಲಯದ ತಪ್ಪಲಲ್ಲಿರುವ ನೇಪಾಳದ ಜನರು ಸದಾ ಭೂಕಂಪದ ಭಯದಲ್ಲೇ ಬದುಕು ನಡೆಸುತ್ತಿದ್ದಾರೆ. ಕ್ರಿ.ಶ. 12ನೇ ಶತಮಾನದಿಂದ 2023ರವರೆಗೆ 20ಕ್ಕೂ ಹೆಚ್ಚು ಪ್ರಬಲ ಭೂಕಂಪಗಳು ಈ ಪ್ರದೇಶದಲ್ಲಿ ಸಂಭವಿಸಿದ್ದು ಸಾವಿರಾರು ಜನ ಮೃತಪಟ್ಟಿದ್ದಾರೆ.
ನ. 3 ಮಧ್ಯರಾತ್ರಿ ನೇಪಾಳದಲ್ಲಿ ಸಂಭವಿಸಿದ ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯ ಭೂಕಂಪದ ಕೇಂದ್ರ ಬಿಂದು ಲಾಮಿಡಾಂಡಾದಲ್ಲಿದೆ ಎಂದು ವರದಿಯಾಗಿದೆ. ಈವರೆಗೂ ಇದರಲ್ಲಿ 129 ಜನ ಮೃತಪಟ್ಟು, 140ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಈ ಭೂಕಂಪದ ಮೂಲಕ ಹಿಮಾಲಯದ ಈ ಪ್ರಾಂತ್ಯದಲ್ಲಿ ಭೂಮಿ ಕಂಪಿಸುವುದು ಸಾಮಾನ್ಯ ಎಂಬಂತಾಗಿದೆ.
ರಿಕ್ಟರ್ ಮಾಪನದಲ್ಲಿ ಗರಿಷ್ಠ 8.2ರವರೆಗೂ ಇಲ್ಲಿ ಭೂಮಿ ಕಂಪಿಸಿದ ಉದಾಹರಣೆಗಳಿವೆ. 2015ರಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪಕ್ಕೆ ಸುಮಾರು 9 ಸಾವಿರ ಜನ ಮೃತಪಟ್ಟಿದ್ದರು. ಲಕ್ಷಕ್ಕೂ ಅಧಿಕ ಜನರ ಮನೆಗಳು ಹಾನಿಗೀಡಾಗಿದ್ದು ಇತ್ತೀಚಿನ ಉದಾಹರಣೆ.
ಭೂಗರ್ಭದ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಸ್ಥಳದಲ್ಲೇ ನೇಪಾಳ ಇರುವುದರಿಂದ ಇಲ್ಲಿ ಆಗಾಗ ಭೂಕಂಪ ಸಂಭವಿಸುವುದು ಸಹಜ. ಇದರೊಂದಿಗೆ ಈ ಪ್ರದೇಶದ ಭೌಗೋಳಿಕ ರಚನೆಯೂ ಆಗಾಗ ಇಲ್ಲಿ ಭೂಕಂಪನ ಸಂಭವಿಸಲು ಕಾರಣವಾಗಿದೆ ಎಂದು ಲಖನೌ ವಿಶ್ವವಿದ್ಯಾಲಯದ ಭೂಗೋಳ ವಿಭಾಗದ ಪ್ರಾಧ್ಯಾಪಕ ಧೃವ್ ಸೆನ್ ಸಿಂಗ್ ವಿವರಿಸಿದ್ದಾರೆ.
‘ಇಂಡಿಯನ್ ಪ್ಲೇಟ್ ಹಾಗೂ ಯುರೇಷಿಯನ್ ಪ್ಲೇಟ್ ನಡುವೆ ಆಗಾಗ ಸಂಭವಿಸುವ ಘರ್ಷಣೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿರುವ ನೇಪಾಳದಲ್ಲಿ ಭೂಕಂಪ ಸಂಭವಿಸುತ್ತದೆ. ಇಂಡಿಯನ್ ಪ್ಲೇಟ್ ಉತ್ತರದತ್ತ ಮಂದವಾಗಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಯುರೇಷಿಯನ್ ಪ್ಲೇಟ್‌ನೊಂದಿಗೆ ಡಿಕ್ಕಿ ಸಂಭವಿಸುತ್ತದೆ. ಟೆಕ್ಟೋನಿಕ್ ಘರ್ಷಣೆಯಿಂದ ಅತಿಯಾದ ಒತ್ತಡ ಉಂಟಾಗುತ್ತದೆ. ಇದರಿಂದ ಭೂಗರ್ಭದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿ ಭೂಮಿ ಕಂಪಿಸುತ್ತದೆ’ ಎಂದು ಕರಿಯರ್ ಇಂಡಿಯಾ ವರದಿ ಮಾಡಿದೆ.
ರಾಷ್ಟ್ರೀಯ ಭೂಭೌತಕೇಂದ್ರ ಮಾಹಿತಿ ವಿಜ್ಞಾನ ಕೇಂದ್ರವು ಈ ಪ್ರಾಂತ್ಯದಲ್ಲಿ ಈವರೆಗೂ ಸಂಭವಿಸಿದ ಭೂಕಂಪ ಮಾಹಿತಿಯ ಪ್ರಕಾರ ಇಲ್ಲಿ ಗರಿಷ್ಠ 8.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ದಾಖಲೆಗಳ ಪ್ರಕಾರ ಕ್ರಿ.ಶ. 1255ರಿಂದ ನಿರಂತರವಾಗಿ ಇಲ್ಲಿ ಭೂಮಿ ಕಂಪಿಸುತ್ತಲೇ ಇರುತ್ತದೆ.
7ನೇ ಜುಲೈ 1255ರಲ್ಲಿ ಕಠ್ಮಂಡುವಿನಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಸುಮಾರು 2,200 ಜನ ಮೃತಪಟ್ಟಿದ್ದರು
1260ರಲ್ಲಿ ಸಾಗರಮಠ ಬಳಿ 7.1 ತೀವ್ರತೆಯ ಭೂಕಂಪದಿಂದ 100 ಸಾವು
1344ರಲ್ಲಿ ಮೆಚಿಯಲ್ಲಿ 7.9 ತೀವ್ರತೆಯ ಭೂಕಂಪದಲ್ಲಿ 100 ಜನ
1408ರಲ್ಲಿ ಕರ್ನಾಟಲಿಯಲ್ಲಿ 8.2 ತೀವ್ರತೆಯ ಭೂಕಂಪದಲ್ಲಿ 6 ಸಾವಿರ ಜನ ಮೃತಪಟ್ಟಿದ್ದರು
1681ರಲ್ಲಿ ಉತ್ತರ ಕೋಸಿ ಪ್ರಾಂತ್ಯದಲ್ಲಿ 8 ತೀವ್ರತೆಯ ಭೂಕಂಪಕ್ಕೆ 4500 ಜನ ಮೃತಪಟ್ಟಿದ್ದರು
1767ರಲ್ಲಿ ಉತ್ತರ ಬಾಗಮತಿ ಪ್ರಾಂತ್ಯದಲ್ಲಿ 7.9 ತೀವ್ರತೆಯ ಭೂಕಂಪಕ್ಕೆ 4 ಸಾವಿರ ಸಾವು
1833ರಲ್ಲಿ ಕಠ್ಮಂಡು ಹಾಗೂ ಬಿಹಾರದಲ್ಲಿ ಸಂಭವಿಸಿದ 8 ತೀವ್ರತೆಯ ಭೂಕಂಪಕ್ಕೆ 6,500 ಸಾವು
1869ರಲ್ಲಿ ಕಠ್ಮಂಡುವಿನಲ್ಲಿ 6.5 ತೀವ್ರತೆಯ ಭೂಕಂಪಕ್ಕೆ 750 ಜನ ಮೃತಪಟ್ಟಿದ್ದರು
1916ರಲ್ಲಿ ನೇಪಾಳ ಹಾಗೂ ಟಿಬೆಟ್ ಗಡಿಯಲ್ಲಿ 7.7 ತೀವ್ರತೆಯ ಭೂಕಂಪದಲ್ಲಿ 3,500 ಸಾವು
1934ರಲ್ಲಿ ನೇಪಾಳ ಹಾಗೂ ಉತ್ತರ ಭಾರತದಲ್ಲಿ ಸಂಭವಿಸಿದ 8 ತೀವ್ರತೆಯ ಭೂಕಂಪದಲ್ಲಿ 10,700–12 ಸಾವಿರ ಮೃತಪಟ್ಟಿದ್ದಾರೆ.
1966ರಲ್ಲಿ ದೋತಿಯಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪದಲ್ಲಿ 80 ಜನರ ಸಾವು
1980ರಲ್ಲಿ ಪತೋರ್‌ಘಡ್ ಹಾಗೂ ಭಾರತದ ಕೆಲ ಭಾಗಗಳಲ್ಲಿ 6.5 ತೀವ್ರತೆಯ ಭೂಕಂಪಕ್ಕೆ 200 ಸಾವು
1988ರಲ್ಲಿ ಕಠ್ಮಂಡು ಹಾಗೂ ಬಿಹಾರದಲ್ಲಿ 6.9 ತೀವ್ರತೆಯ ಭೂಕಂಪಕ್ಕೆ 1,091 ಜನ ಮೃತಪಟ್ಟಿದ್ದರು
2011ರಲ್ಲಿ ನೇಪಾಳ ಹಾಗೂ ಭಾರತದ ಗಡಿ ಭಾಗದಲ್ಲಿ 6.9 ತೀವ್ರತೆಯ ಕಂಪನಕ್ಕೆ 111 ಜನರ ಸಾವು
2015ರಲ್ಲಿ ಗೂರ್ಖಾ, ಟಿಬೆಟ್‌ನಲ್ಲಿ 8.1 ತೀವ್ರತೆಯ ಭೂಕಂಪಕ್ಕೆ 8,857 ಜನರ ಸಾವು
2015ರಲ್ಲಿ ಡೋಲಖ್‌ನಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 213 ಜನರ ಸಾವು
2022ರಲ್ಲಿ ದೋತಿಯಲ್ಲಿ 5.7 ತೀವ್ರತೆಯ ಭೂಕಂಪಕ್ಕೆ 6 ಜನರ ಸಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.