ಢಾಕಾ: ಬಾಂಗ್ಲಾದೇಶದ ನೈಋತ್ಯ ಭಾಗದಲ್ಲಿ ಇಸ್ಲಾಂ ಧರ್ಮವನ್ನು ಹೀನಾಯಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಕೆಲವು ದುಷ್ಕರ್ಮಿಗಳು ಹಿಂದೂ ದೇವಸ್ಥಾನ, ಅಂಗಡಿ, ಮನೆಗಳನ್ನು ಧ್ವಂಸ ಮಾಡಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ಕುರಿತು ಅಲ್ಲಿನ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ನರೈಲ್ ಜಿಲ್ಲೆಯ ಸಹಪರ ಗ್ರಾಮದಲ್ಲಿ ಶುಕ್ರವಾರ ಸಂಜೆ ಹಲವು ಮನೆಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚುತ್ತಿರುವಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಕೃತ್ಯದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೇವಸ್ಥಾನಗಳ ಮೇಲೆ ಇಟ್ಟಿಗೆಗಳನ್ನು ತೂರಿದ್ದಾರೆ. ದೇವಸ್ಥಾನದ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದು ಹಾಕಿದ್ದಾರೆ. ಹಲವು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಫೇಸ್‌ಬುಕ್‌ನಲ್ಲಿ ಯುವಕನೊಬ್ಬ ಅವಹೇಳನಕಾರಿ ಹೇಳಿಕೆಯನ್ನು ಪ್ರಕಟಿಸಿದ್ದರಿಂದ ಮುಸ್ಲಿಂ ಸಮುದಾಯದ ಕೆಲವರನ್ನು ಕೆರಳಿಸಿದೆ. ತಲೆಮರೆಸಿಕೊಂಡಿರುವ ಯುವಕನನ್ನು ಬಂಧಿಸಲು ಸಾಧ್ಯವಾಗದ ಹಿನ್ನೆಲೆ ಆತನ ತಂದೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆ ಬಳಿಕ ಕೆಲವು ಉದ್ರಿಕ್ತರು ಗುಂಪುಗೂಡಿ ದಾಳಿ ನಡೆಸಿದ್ದಾರೆ. ಇದುವರೆಗೆ ದಾಳಿ ನಡೆಸಿದ ಯಾವೊಬ್ಬ ಆರೋಪಿಗಳ ಬಂಧನವಾಗಿಲ್ಲ.
ಜನವರಿ 2013ರಿಂದ ಸೆಪ್ಟೆಂಬರ್ 2021ರ ನಡುವೆ ಹಿಂದೂ ಸಮುದಾಯದ ಮೇಲೆ 3,679 ದಾಳಿಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.