ADVERTISEMENT

ಅಮೆರಿಕದ ಆಯೋಗದಲ್ಲಿ ಹಿಂದೂಗಳಿಗಿಲ್ಲ ಪ್ರಾತಿನಿಧ್ಯ: ಭಾರತದ ಚಿಂತಕರ ಚಾವಡಿ ಆರೋಪ

ಪಿಟಿಐ
Published 18 ಮೇ 2024, 14:25 IST
Last Updated 18 ಮೇ 2024, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ‘ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದಲ್ಲಿ (ಯುಎಸ್‌ಸಿಐಆರ್‌ಎಫ್) ಹಿಂದೂಗಳ ಪ್ರಾತಿನಿಧ್ಯವೇ ಇಲ್ಲ. ಜೊತೆಗೆ ಭಾರತ ಮತ್ತು ಹಿಂದೂಗಳ ಕುರಿತು ಅದು ಪ್ರಕಟಿಸುವ ವರದಿಗಳು ಪಕ್ಷಪಾತವಾಗಿಯೂ, ಅವೈಜ್ಞಾನಿಕವಾಗಿಯೂ ಇರುತ್ತವೆ’ ಎಂದು ಅನಿವಾಸಿ ಭಾರತದ ಚಿಂತಕರ ಚಾವಡಿಯೊಂದು ಶುಕ್ರವಾರ ಆರೋಪಿಸಿದೆ.  

ಅಮೆರಿಕದ ಒಟ್ಟಾರೆ ಜನಸಂಖ್ಯೆ ಪೈಕಿ ಹಿಂದೂಗಳ ಸಂಖ್ಯೆ ಶೇ 1ರಷ್ಟಿದೆ. ಅಲ್ಲದೆ, ಹಿಂದೂ ಧರ್ಮವು ವಿಶ್ವದ ಮೂರನೇ ದೊಡ್ಡ ಧರ್ಮವಾಗಿದೆ ಎಂದೂ ಚಿಂತಕರ ಚಾವಡಿ ಹೇಳಿದೆ.

ಯುಎನ್‌ಸಿಐಆರ್‌ಎಫ್ ಆಯೋಗಕ್ಕೆ ಮಾರೀನ್ ಫರ್ಗ್ಯೂಸನ್, ವಿಕ್ಕಿ ಹಾಜ್ಲರ್‌ ಮತ್ತು ಆಸಿಫ್ ಮಹಮೂದ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.  

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಅನಿವಾಸಿ ಭಾರತೀಯರ ಅಧ್ಯಯನಗಳು ಮತ್ತು ಭಾರತೀಯ ಸಂಸ್ಥೆ (ಎಫ್ಐಐಡಿಎಸ್)ಯ ನೀತಿ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾಗಿರುವ ಖಾಂಡೆರಾವ್ ಖಂಡ್, ‘ಯುಎಸ್‌ಸಿಐಆರ್‌ಎಫ್‌ಗೆ ನೂತನ ಸದಸ್ಯರಾಗಿ ನೇಮಕವಾದವರಿಗೆ ಅಭಿನಂದನೆಗಳು. ಆದರೆ, ಈ ಸಂಸ್ಥೆಗೆ ದೊಡ್ಡ ಸಮುದಾಯವೊಂದರ ಪ್ರಾತಿನಿಧ್ಯ ದಕ್ಕಿಸಿಕೊಡಬಹುದಾದ ಐತಿಹಾಸಿಕ ಅವಕಾಶವೊಂದನ್ನು ಮುಖಂಡರು ತಪ್ಪಿಸಿಕೊಂಡಿದ್ದಾರೆ. ಭೂಮಿಯ ಮೇಲಿನ ಪ್ರತಿ ಆರು ಮಂದಿ ಪೈಕಿ ಒಬ್ಬರು ಹಿಂದೂ ಧರ್ಮದವರೇ ಆಗಿರುತ್ತಾರೆ. ಆದರೆ, ಆ ಸಮುದಾಯಕ್ಕೆ ಯುಎಸ್‌ಸಿಐಆರ್‌ಎಫ್‌ನಲ್ಲಿ ಪ್ರಾತಿನಿಧ್ಯವಿಲ್ಲ. ಇದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯಲ್ಲಿ ಸಮತೋಲನ ಮತ್ತು ವೈವಿದ್ಯತೆಯನ್ನು ತರುವಲ್ಲಿ ವಿಫಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.