ADVERTISEMENT

ಹಿಟ್ಲರ್‌ನ ಕೈಗಡಿಯಾರ ಹರಾಜು: ಭಾರಿ ಮೊತ್ತಕ್ಕೆ ಮಾರಾಟ

ಏಜೆನ್ಸೀಸ್
Published 1 ಆಗಸ್ಟ್ 2022, 2:46 IST
Last Updated 1 ಆಗಸ್ಟ್ 2022, 2:46 IST
ಹಿಟ್ಲರ್‌ನ ಮಾರಾಟಗೊಂಡ ಕೈಗಡಿಯಾರ
ಹಿಟ್ಲರ್‌ನ ಮಾರಾಟಗೊಂಡ ಕೈಗಡಿಯಾರ    

ಚೆಸಾಪೀಕ್ ಸಿಟಿ (ಅಮೆರಿಕ): ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಕೈಗಡಿಯಾರವನ್ನು 1.1 ದಶಲಕ್ಷ ಡಾಲರ್‌ಗೆ (₹ 8.71 ಕೋಟಿ) ಮಾರಾಟ ಮಾಡಲಾಗಿದೆ.

ಅಮೆರಿಕದ ಚೆಸಾಪೀಕ್ ನಗರದಲ್ಲಿರುವ ಐತಿಹಾಸಿಕ ವಸ್ತುಗಳ ಹರಾಜು ಸಂಸ್ಥೆ, ‘ಅಲೆಕ್ಸಾಂಡರ್ ಹಿಸ್ಟಾರಿಕಲ್‌ ಆಕ್ಷನ್ಸ್‌’ ಕೈಗಡಿಯಾರಕ್ಕೆ 2 ರಿಂದ 4 ದಶಲಕ್ಷ ಮೌಲ್ಯ ನಿಗದಿ ಮಾಡಿತ್ತು. ಗಡಿಯಾರವನ್ನು ‘ಐತಿಹಾಸಿಕ, ಎರಡನೇ ಮಹಾಯುದ್ಧದ ಅವಶೇಷ‘ ಎಂದು ವಿವರಿಸಿತ್ತು.

ಆದರೆ, ಕೈಗಡಿಯಾರದ ಮಾರಾಟಕ್ಕೆ ಯಹೂದಿ ನಾಯಕರು ಮತ್ತು ಇತರರು ಆಕ್ಷೇಪಿಸಿದ್ದರು ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ. ಇದು ಯಾವುದೇ ಐತಿಹಾಸಿಕ ಮೌಲ್ಯ ಹೊಂದಿಲ್ಲ ಎಂದು ಅವರು ಹೀಗಳೆದಿದ್ದರು.

ADVERTISEMENT

ಹರಾಜು ಸಂಸ್ಥೆಯ ಅಧ್ಯಕ್ಷ ಬಿಲ್ ಪನಾಗೋಪುಲೋಸ್ ಮಾರಾಟವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಯುರೋಪಿಯನ್ ಯಹೂದಿಯೊಬ್ಬರು ಕೈಗಡಿಯಾರವನ್ನು ಖರೀದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಗಡಿಯಾರವು ಎಎಚ್‌ ಎಂಬ ಅಕ್ಷರಗಳನ್ನು ಮತ್ತು ಸ್ವಸ್ತಿಕ್‌ ಸಂಕೇತವನ್ನು ಒಳಗೊಂಡಿದೆ. 1945ರ ಮೇನಲ್ಲಿ ಹಿಟ್ಲರ್‌ ವಿರುದ್ಧ ಜರ್ಮನಿಯ ಬರ್ಚ್‌ಟೆಸ್‌ಗಾಡೆನ್‌ನಲ್ಲಿ ನಡೆದ ಕಾರ್ಯಾಚರಣೆಯ ಮುಂಚೂಣಿ ಘಟಕದಲ್ಲಿದ್ದ ಫ್ರೆಂಚ್ ಸೈನಿಕ ಈ ಕೈಗಡಿಯಾರವನ್ನು ವಶಕ್ಕೆ ಪಡೆದಿದ್ದ ಎಂದು ಹರಾಜು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.