ADVERTISEMENT

ಟ್ರಂಪ್‌ ಹತ್ಯೆ ಯತ್ನ: ಸ್ವತಂತ್ರ ತಜ್ಞರ ತಂಡ ರಚನೆ

ಎಪಿ
Published 22 ಜುಲೈ 2024, 12:27 IST
Last Updated 22 ಜುಲೈ 2024, 12:27 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆ ಯತ್ನ ಪ್ರಕರಣವನ್ನು ಪರಾಮರ್ಶಿಸಲು ಸ್ವತಂತ್ರ ತಜ್ಞರ ತಂಡವೊಂದನ್ನು ಅಮೆರಿಕದ ಆಂತರಿಕ ಭದ್ರತಾ ಕಾರ್ಯದರ್ಶಿ ಹಲೆಹ್ಯಾಂಡ್ರೊ ಮಯೋರ್ಕಸ್‌ ಅವರು ನೇಮಿಸಿದ್ದಾರೆ.

‘ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್‌ ಅವರ ಪ್ರಚಾರ ಕಾರ್ಯಕ್ರಮ ಆಯೋಜನೆಗೊಳ್ಳುವ ಹಂತದಲ್ಲಿ, ಕಾರ್ಯಕ್ರಮ ನಡೆಯುತ್ತಿದ್ದಾಗ ಹಾಗೂ ಹತ್ಯೆ ಯತ್ನ ನಡೆದ ಬಳಿಕ, ಸೀಕ್ರೆಟ್‌ ಸರ್ವಿಸ್‌ ಸೇರಿದಂತೆ ರಾಜ್ಯ ಹಾಗೂ ಸ್ಥಳೀಯ ಆಡಳಿತವು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದವು ಎನ್ನುವ ಕುರಿತು ಈ ತಂಡವು ಪರಾಮರ್ಶೆ ನಡೆಸಲಿದೆ. 45 ದಿನಗಳ ಒಳಗಾಗಿ ವರದಿಯನ್ನು ಈ ತಂಡ ನೀಡಬೇಕಿದೆ’ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಹೇಳಿದ್ದಾರೆ.

‘ಅಮೆರಿಕದ ಸೀಕ್ರೆಟ್‌ ಸರ್ವಿಸ್‌ನ ಭದ್ರತಾ ನೀತಿಗಳು, ಕಾರ್ಯವಿಧಾನಗಳ ಕುರಿತೂ ಈ ತಜ್ಞರ ತಂಡವು ಪರಾಮರ್ಶೆ ನಡೆಸಲಿದೆ. ತನಿಖೆ ಹಂತದಲ್ಲಿ ಇನ್ನಷ್ಟು ಮಾಹಿತಿಯ ಅಗತ್ಯವಿದ್ದಲ್ಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ತಜ್ಞರು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದೂ ಅವರು ವಿವರಿಸಿದ್ದಾರೆ.

ADVERTISEMENT

‘ಸಿಕ್ರೇಟ್‌ ಸರ್ವೀಸ್‌ ತನ್ನ ಕಾರ್ಯವಿಧಾನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆ ಮೂಲಕ ತನ್ನ ಕಾರ್ಯಕ್ಷಮತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಕುರಿತು ವರದಿ ನೀಡಲಿದ್ದೇವೆ. ಟ್ರಂಪ್‌ ಹತ್ಯೆ ಯತ್ನದಂಥ ಪ್ರಮಾದವು ಇನ್ನೊಂದು ಬಾರಿ ಘಟಿಸದಂತೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ’ ಎಂದು ಸ್ವತಂತ್ರ ತಜ್ಞರ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

ತಜ್ಞರ ತಂಡ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಈ ರೀತಿಯ ಘಟನೆಯು ಇನ್ನೆಂದೂ ನಡೆಯದಂತೆ ತಂಡವು ಯಾವೆಲ್ಲಾ ಶಿಫಾರಸುಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಲು ಉತ್ಸುಕಳಾಗಿದ್ದೇನೆ

-ಕಿಮ್‌ ಚೆಟಲ್‌, ನಿರ್ದೇಶಕಿ ಸಿಕ್ರೇಟ್‌ ಸರ್ವೀಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.