ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎದುರಾಳಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ತನ್ನೆಲ್ಲಾ ಶಕ್ತಿಯನ್ನು ಬಳಸುತ್ತೇನೆ ಎಂದಿದ್ದಾರೆ.
ಬೈಡನ್ ಅವರು ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದು, ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ್ದರು.
‘ಜೋ ಬೈಡನ್ ಅವರಿಂದ ಅನುಮೋದನೆ ಪಡೆದಿರುವುದು ಗೌರವದ ವಿಚಾರ. ಈ ಚುನಾವಣೆಯನ್ನು ಗೆಲ್ಲುವುದು ನನ್ನ ಗುರಿ’ ಎಂದು 59 ವರ್ಷದ ಕಮಲಾ ಹೇಳಿದ್ದಾರೆ.
ಬೈಡನ್ ಅವರು ಕಮಲಾ ಅವರನ್ನು ಅನುಮೋದಿಸಿದರೂ, ಅಧ್ಯಕ್ಷೀಯ ಕಣದಲ್ಲಿ ಕಮಲಾ ಅವರೇ ಮುಂದುವರಿಯಲಿದ್ದಾರೆಯೇ ಅಥವಾ ಬೇರೆ ಅಭ್ಯರ್ಥಿಯನ್ನು ಪಕ್ಷ ಘೋಷಿಸಲಿದೆಯೇ ಎನ್ನುವುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
‘ನವೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಅಭ್ಯರ್ಥಿಯನ್ನು ಆಯ್ಕೆಮಾಡಲು ಪಕ್ಷವು ಪಾರದರ್ಶಕ ಮತ್ತು ಕ್ರಮಬದ್ಧ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ’ ಎಂದು ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜೇಮಿ ಹ್ಯಾರಿಸನ್ ತಿಳಿಸಿದ್ದಾರೆ.
ಬೈಡನ್ ಅವರು ಅನುಮೋದಿಸಿದ್ದರೂ, ಮುಂದಿನ ತಿಂಗಳು ಷಿಕಾಗೋದಲ್ಲಿ ನಡೆಯುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷದ ಪ್ರತಿನಿಧಿಗಳು ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.