ಗಾಜಾಪಟ್ಟಿ, ಪ್ಯಾಲೇಸ್ಟೀನ್ ಪ್ರಾಂತ್ಯ: ಯುದ್ಧಬಾಧಿತ ಗಾಜಾದಲ್ಲಿ ಹಮಾಸ್‌ನ ಬಂಡುಕೋರರು ಇರಿಸಿಕೊಂಡಿರುವ ಒತ್ತೆಯಾಳುಗಳ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ ಎನ್ನುವ ಭರವಸೆ ಮಂಗಳವಾರ ಮೂಡಿದೆ.
ಸಂಧಾನ ಕಾರ್ಯದ ಮಧ್ಯಸ್ಥಿಕೆ ವಹಿಸಿದ್ದ, ಹಮಾಸ್ ಬಂಡುಕೋರರ ಗುಂಪಿನ ಮುಖಂಡರೊಬ್ಬರು, ಸಂಧಾನದ ಸಾಧ್ಯತೆ ನಿಚ್ಚಳವಾಗಿದೆ ಎಂದಿದ್ದಾರೆ.
‘ಒತ್ತೆಯಾಳುಗಳ ಬಿಡುಗಡೆಯ ವಿಚಾರದಲ್ಲಿ ಪ್ರಗತಿ ಕಂಡು ಬಂದಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಹಮಾಸ್‌ನ ನಾಯಕ ಇಸ್ಮಾಯಿಲ್ ಹನಿಯೇಹ್ ಸಹ, ‘ನಾವು ಸಂಧಾನ ಪ್ರಕ್ರಿಯೆಯ ಕೊನೆಯ ಹಂತದಲ್ಲಿದ್ದೇವೆ’ ಎಂದು ತಿಳಿಸಿದ್ದಾರೆ.
ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿರುವ ಸಿಎನ್‌ಎನ್ ಸುದ್ದಿ ವಾಹಿನಿಯು, ‘ಸಂಧಾನ ಮಾತುಕತೆಯು ಬಹುತೇಕ ಅಂತ್ಯಕ್ಕೆ ಸಮೀಪಿಸಿದೆ. ಮಧ್ಯಸ್ಥಿಕೆ ವಹಿಸಿರುವ ಕತಾರ್ ಈ ಕುರಿತಂತೆ ಅಂತಿಮ ಘೋಷಣೆಯನ್ನು ಮಾಡಬಹುದು’ ಎಂದು ತಿಳಿಸಿದೆ.
ಹಮಾಸ್‌ನಿಂದ ಒತ್ತೆಯಾಳುಗಳು ಹಾಗೂ ಇಸ್ರೇಲ್‌ನಿಂದ ಪ್ಯಾಲೆಸ್ಟೀನ್ ಕೈದಿಗಳ ಬಿಡುಗಡೆಗೆ ಒಪ್ಪಂದವಾಗುವ ಸಾಧ್ಯತೆಗಳಿವೆ. ಜೊತೆಗೆ ಮಾನವೀಯ ನೆರವು ಒದಗಿಸಲು ತಾತ್ಕಾಲಿಕ ಕದನ ವಿರಾಮ ಘೋಷಿಸಬಹುದು ಎಂದು ತಿಳಿಸಿವೆ.
ಬಂಡುಕೋರರ ಜೊತೆಗಿನ ಸಂಧಾನ ಕಾರ್ಯವು ಫಲಪ್ರದವಾಗುವ ಸುಳಿವು ಭಾನುವಾರವೇ ವ್ಯಕ್ತವಾಗಿತ್ತು. ‘ರಾಜಿ ಪ್ರಕ್ರಿಯೆ ಬಹುತೇಕ ಮುಗಿದಿದೆ. ಕೆಲ ತಾಂತ್ರಿಕ ಅಂಶಗಳಷ್ಟೇ ಇತ್ಯರ್ಥಗೊಳ್ಳಬೇಕಿದೆ’ ಎಂದು ಕತಾರ್ ತಿಳಿಸಿತ್ತು.
ಕೈದಿಗಳ ವಿನಿಮಯ ಮತ್ತು ಒತ್ತೆಯಾಳುಗಳ ಬಿಡುಗಡೆ ಕಾರ್ಯದಲ್ಲಿ ಸಾಮಾನ್ಯವಾಗಿ ಭಾಗಿಯಾಗುವ ಅಂತರರಾಷ್ಟ್ರೀಯ ಸಮಿತಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರು ಕತಾರ್‌ನಲ್ಲಿ ಹನಿಯೇಹ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಿದ್ದು, ಭರವಸೆಯನ್ನು ಹೆಚ್ಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.