ADVERTISEMENT

ಟ್ರಂಪ್ ರಾಜೀನಾಮೆ ನೀಡದಿದ್ದರೆ ದೋಷಾರೋಪಣೆ: ನ್ಯಾನ್ಸಿ ಪೆಲೋಸಿ

ಪಿಟಿಐ
Published 9 ಜನವರಿ 2021, 7:07 IST
Last Updated 9 ಜನವರಿ 2021, 7:07 IST
ನ್ಯಾನ್ಸಿ ಪೆಲೊಸಿ
ನ್ಯಾನ್ಸಿ ಪೆಲೊಸಿ   

ವಾಷಿಂಗ್ಟನ್‌: ‘ಡೊನಾಲ್ಡ್ ಟ್ರಂಪ್ ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಅವರ ವಿರುದ್ಧ ಕ್ಯಾಪಿಟಲ್‌ ಹಿಲ್ಸ್‌ಗೆ (ಸಂಸತ್‌ ಭವನ) ನುಗ್ಗಿದ ಜನಸಮೂಹವನ್ನು ಪ್ರೋತ್ಸಾಹಿಸಿದ್ದಾರೆಂದು ದೋಷಾರೋಪಣೆಹೊರಿಸಲಾಗುತ್ತದೆ‘ ಎಂದು ಅಮೆರಿಕದ ಸಂಸತ್ ಸಭೆಯ (ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ಕ್ಯಾಪಿಟಲ್ ಹಿಲ್ಸ್‌ ಮೇಲಿನ ದಾಳಿಯ ನಂತರ ಟ್ರಂಪ್ ಅವರನ್ನು ಅಧ್ಯಕ್ಷರ ಹುದ್ದೆಯಿಂದ ತೆಗೆದು ಹಾಕಬೇಕೆಂದು ಡೆಮಾಕ್ರಟಿಕ್ ಪಕ್ಷದ ಸಂಸದರು ಸೇರಿದಂತೆ ವಿವಿಧ ನಾಯಕರು ಒತ್ತಾಯಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಟ್ರಂಪ್ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

‘ಟ್ರಂಪ್, ತಾವಾಗಿಯೇ ಅಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡುತ್ತಾರೆಂಬುದು ಸದಸ್ಯರ ಆಶಯವಾಗಿದೆ. ಒಂದೊಮ್ಮೆ ಅದು ಆಗದಿದ್ದರೆ, ಸಂವಿಧಾನದ 25ನೇ ತಿದ್ದುಪಡಿಯ ಅಸ್ತ್ರ ಹಾಗೂ ದೋಷಾರೋಪಣೆ (ಮಹಾಭಿಯೋಗ) ನಿರ್ಣಯದೊಂದಿಗೆ ಮುಂದುವರಿಯಲು ನಿಯಮಗಳ ಸಮಿತಿಗೆ ಸೂಚಿಸಿದ್ದೇನೆ‘ ಎಂದು ಪೆಲೋಸಿ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದ ನಂತರ ಪೆಲೋಸಿ ‘ಸದನವು 25ನೇ ತಿದ್ದುಪಡಿ ಅಥವಾ ದೋಷಾರೋಪಣೆ ಪ್ರಕ್ರಿಯೆ ಸೇರಿದಂತೆ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿದೆ’ ಎಂದು ಹೇಳಿದ್ದಾರೆ.

‘ದೋಷಾರೋಪಣೆಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭವಾಗಬೇಕು’ ಎಂದು ಭಾರತೀಯ ಮೂಲದ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಆಗ್ರಹಿಸಿದ್ದಾರೆ.

‘ಅಮೆರಿಕದ ಸುರಕ್ಷತೆಯ ದೃಷ್ಟಿಯಿಂದ ಟ್ರಂಪ್, ಇನ್ನೊಂದು ದಿನ ಶ್ವೇತಭವನದಲ್ಲಿರುವುದು ಅಪಾಯವೇ ಸರಿ‘ ಎಂದು ಸಂಸದೆ ಕೆ. ಕಹಲೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.