ವಾಷಿಂಗ್ಟನ್: ಕೆಂಪು ಸಮುದ್ರ ಹಾಗೂ ಏಡನ್ ಕೊಲ್ಲಿಯಲ್ಲಿ ಎರಡು ಹಡಗುಗಳ ಮೇಲೆ ಯಮನ್‌ನಲ್ಲಿರುವ ಇರಾನ್ ಬೆಂಬಲಿತ ಹುತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಂದು ಹಡಗಿಗೆ ಅಲ್ಪ ಹಾನಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಮೆರಿಕ ಸೇನೆ ಮಂಗಳವಾರ ತಿಳಿಸಿದೆ.
ಒಂದು ವೇಳೆ ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ನಿಲ್ಲದೇ ಹೋದರೆ ಇನ್ನಷ್ಟು ದಾಳಿ ನಡೆಸಲಾಗುವುದು ಎಂದು ಹುತಿ ಬಂಡುಕೋರರ ನಾಯಕ ಅಬ್ದುಲ್ ಮಲಿಕ್ ಅಲ್–ಹುತಿ ಎಚ್ಚರಿಕೆಯನ್ನೂ ನೀಡಿದ್ದಾನೆ.
ಸ್ಟಾರ್ ನಾಸಿಯಾ ಹಾಗೂ ಮಾರ್ನಿಂಗ್ ಟೈಡ್ಸ್ ಎನ್ನುವ ಹಡಗುಗಳು ದಾಳಿಗೆ ಒಳಗಾಗಿವೆ. ಗ್ರೀಕ್‌ನ ಸ್ಟಾರ್ ನಾಸಿಯಾ ಹಡಗಿಗೆ ಹಾನಿಯಾಗಿದ್ದು, ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಗ್ರೀಕ್ ಅಧಿಕಾರಿಗಳು ತಿಳಿಸಿದ್ದಾರೆ.
‘ಹಡಗಿನ ಸಮೀಪ ಸ್ಫೋಟ ಸಂಭವಿಸಿದ್ದು, ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಗಳೂ ಸುರಕ್ಷಿತವಾಗಿದ್ದಾರೆ. ಹಡಗು ತನ್ನ ಮಾರ್ಗದಲ್ಲಿ ಮುಂದುವರಿಯುತ್ತಿದೆ’ ಎಂದು ಮಾರ್ನಿಂಗ್ ಟೈಡ್‌ನ ಮಾಲೀಕ ಸಂಸ್ಥೆ ಬ್ರಿಟನ್‌ನ ಫುರಡಿನೊ ಶಿಪ್ಪಿಂಗ್ ಲಿಮಿಟೆಡ್ ತಿಳಿಸಿದೆ.
ಇಸ್ರೇಲ್– ಗಾಜಾ ಯುದ್ಧದಲ್ಲಿ ಪ್ಯಾಲೆಸ್ಟೀನಿಯನ್ನರ ಪರ ಬೆಂಬಲ ಸೂಚಿಸುವ ಸಲುವಾಗಿ, ಹುತಿ ಬಂಡುಕೋರರು, ಕೆಂಪು ಸಮುದ್ರದಲ್ಲಿ ಸಂಚರಿಸುವ ಅಮೆರಿಕದ ಹಡುಗುಗಳ ಮೇಲೆ ನವೆಂಬರ್ ತಿಂಗಳಿನಿಂದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.