ಕೀವ್: ರಷ್ಯಾದ ಯುದ್ಧ ಕೈದಿಗಳ ಕಾಲುಗಳಿಗೆ ಉಕ್ರೇನ್ ಯೋಧರು ಗುಂಡು ಹಾರಿಸುತ್ತಿರುವಂತೆ ಇರುವ ವಿಡಿಯೊ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಮೇಲಿನ ರಷ್ಯಾ ದಾಳಿ ವೇಳೆ ಯುದ್ಧ ಅಪರಾಧಗಳು ನಡೆದಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುವಂತೆ ಉಕ್ರೇನ್ ಅಧಿಕಾರಿಗಳಿಗೆ ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆ ಸೂಚಿಸಿದೆ.
ಸೆರೆ ಹಿಡಿಯಲಾದ ಯೋಧರ ಮೇಲೆ ಹಲ್ಲೆ ನಡೆಸಿ, ಕಾಲುಗಳಿಗೆ ಗುಂಡು ಹಾರಿಸಿರುವುದು ಖಚಿತವಾದರೆ, ಅದು ಯುದ್ಧದ ಅಪರಾಧವಾಗಲಿದೆ. ಈ ಬಗ್ಗೆ ಉಕ್ರೇನ್ ತನಿಖೆ ನಡೆಸಬೇಕು. ಅಂತರರಾಷ್ಟ್ರೀಯ ಮಾನವೀಯ ಹಕ್ಕುಗಳ ಗಂಭೀರ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಕಣ್ಗಾವಲು ಹೇಳಿದೆ.
ಏತನ್ಮಧ್ಯೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷರ ಸಲಹೆಗಾರ ಒಲೆಕ್‌ಸಿ ಅರೆಸ್ಟೊವಿಚ್ ಅವರು, 'ಇಂಥ ಘಟನೆಯಲ್ಲಿ ತೊಡಗಿದರೆ, ಅದು ಯುದ್ಧ ಅಪರಾಧವಾಗಲಿದೆ' ಎಂದು ಒಪ್ಪಿದ್ದಾರೆ. ಅಲ್ಲದೆ 'ಈ ಘಟನೆಯಲ್ಲಿ ತೊಡಗಿದವರು ಶಿಕ್ಷೆ ಗುರಿಯಾಗಲಿದ್ದಾರೆ. ಯುದ್ಧ ಕೈದಿಗಳ ಜತೆ ನಮಗೆ ವೈಯಕ್ತಿಕ ಮತ್ತು ಭಾವನಾತ್ಮಕ ಭಾವನೆಗಳಿದ್ದರೂ, ಅವರನ್ನು ನಾವು ಜಿನೆವಾ ಒಪ್ಪಂದದಂತೆ ನಡೆಸಿಕೊಳ್ಳುತ್ತೇವೆ' ಎಂದು ಒಪ್ಪಿಕೊಂಡಿದ್ದಾರೆ.
ವಿಡಿಯೊದ ನೈಜತೆ ದೃಢೀಕರಿಸಲು ಸಾಧ್ಯವಾಗದಿದ್ದರೂ, ಉಕ್ರೇನ್ ಪಡೆಗಳು ಹಾರ್ಕಿವ್ ನಗರದ ಹೊರವಲಯದ ಮಾಲಾ ರೋಗನ್ ಗ್ರಾಮದಲ್ಲಿ ಸೆರೆ ಸಿಕ್ಕ ಸೈನಿಕರ ಮೇಲೆ ಯುದ್ಧಾಪರಾಧ ಎಸಗಿರುವುದು ಕಂಡುಬಂದಿದೆ ಎಂದು ಸುದ್ದಿಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.