ವಿಶ್ವಸಂಸ್ಥೆ ; 'ಅಫ್ಗಾನಿಸ್ತಾನದಲ್ಲಿ ಮುಂಬರುವ ದಿನಗಳಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ' ಎಂದು ವಿಶ್ವಸಂಸ್ಥೆಯಲ್ಲಿನ ಜಾಗತಿಕ ಮಕ್ಕಳ ಪ್ರತಿನಿಧಿ ಯುನಿಸೆಫ್ ಹೇಳಿದೆ.
'ಅಫ್ಗಾನಿಸ್ತಾನದಲ್ಲಿ ಸದ್ಯ ಒಂದು ಕೋಟಿ ಮಕ್ಕಳು ಮಾನವೀಯ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಅವರಲ್ಲಿ ಹತ್ತು ಲಕ್ಷ ಮಕ್ಕಳು ಗಂಭೀರ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. 42ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರಲ್ಲಿ 22 ಲಕ್ಷ ಹೆಣ್ಣು ಮಕ್ಕಳು ಸೇರಿದ್ದಾರೆ' ಎಂದು ಯುನಿಸೆಫ್ ಹೇಳಿದೆ.
'ಅಫ್ಗಾನಿಸ್ತಾನ ಬಡ ರಾಷ್ಟ್ರ. ಅಲ್ಲದೇ ಕಳೆದ ಮೂರು ವರ್ಷಗಳಿಂದ ಅಲ್ಲಿ ಬರಗಾಲ ಆವರಿಸಿದೆ. ಕೊರೊನಾ ಸಾಂಕ್ರಾಮಿಕದಿಂದ ಆ ದೇಶವೂ ನರಳಿದೆ. ಇದೀಗ ತಾಲಿಬಾನ್ ಕಡೆಯಿಂದ ಉಂಟಾಗಿರುವ ಅರಾಜಕತೆಯಿಂದ ಆ ದೇಶದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ. ಇದು ಕಟು ಸತ್ಯ' ಎಂದು ಯುನಿಸೆಫ್ ನಿರ್ದೇಶಕಿ ಹೆನ್ರಿಟ್ಟಾ ಫೋರ್ ಸೋಮವಾರ ಹೇಳಿದ್ದಾರೆ.
'ಯುನಿಸೆಫ್ ಅಫ್ಗಾನಿಸ್ತಾನದ ಮಕ್ಕಳ ಸಲುವಾಗಿ ಸೇವೆ ನೀಡಲು ಸಿದ್ದವಿದೆ. ಆದರೆ, ಪ್ರಸ್ತುತ ಆ ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇದನ್ನು ಸಾಧ್ಯವಾಗಿಸುತ್ತಿಲ್ಲ' ಎಂದು ಫೋರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.