ADVERTISEMENT

ಲಾವೋಸ್‌: ಅಣೆಕಟ್ಟೆ ಒಡೆದು 100ಕ್ಕೂ ಹೆಚ್ಚು ಜನ ಕಣ್ಮರೆ

ಏಜೆನ್ಸೀಸ್
Published 25 ಜುಲೈ 2018, 10:36 IST
Last Updated 25 ಜುಲೈ 2018, 10:36 IST
ಮುಳುಗಡೆಯಾಗಿರುವ ಮನೆ ಮೇಲೆ ನೆರವಿಗೆ ಕಾಯುತ್ತಿರುವ ಜನ. ಚಿತ್ರ: ಎಪಿ
ಮುಳುಗಡೆಯಾಗಿರುವ ಮನೆ ಮೇಲೆ ನೆರವಿಗೆ ಕಾಯುತ್ತಿರುವ ಜನ. ಚಿತ್ರ: ಎಪಿ   

ಬ್ಯಾಂಕಾಕ್‌:ಆಗ್ನೇಯ ಲಾವೋಸ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದಜಲವಿದ್ಯುತ್‌ ಉತ್ಪಾದನಾ ಅಣೆಕಟ್ಟೆ ಭಾರಿ ಮಳೆಯಿಂದಾಗಿ ಒಡೆದು 100ಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ. ಮೃತಪಟ್ಟವರೆಷ್ಟೆಂದು ಗೊತ್ತಾಗಿಲ್ಲ. ಆರು ಗ್ರಾಮಗಳು ಮುಳುಗಡೆಯಾಗಿವೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಕಾಂಬೋಡಿಯಾ ಗಡಿಯಲ್ಲಿ ಸೋಮವಾರ ಸಂಜೆ ಈ ಘಟನೆ ಸಂಭವಿಸಿದೆ. ಐದು ದಶ ಲಕ್ಷ ಕ್ಯೂಸೆಕ್‌ ಮೀಟರ್‌ ನೀರು(ಎರಡು ದಶಲಕ್ಷಕ್ಕೂ ಹೆಚ್ಚು ಒಲಿಂಪಿಕ್‌ ಈಜುಕೊಳಗಳಲ್ಲಿ ಸಂಗ್ರಹವಾಗುವಷ್ಟು) ಹೊರ ಹರಿದಿದೆ ಎಂದು ಲಾವೋಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಹಲವು ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಕಾಣೆಯಾಗಿದ್ದಾರೆ’ ಎಂದು ಸಂಸ್ಥೆ ಹೇಳಿದೆ. 6,600 ಜನ ಮನೆಗಳನ್ನು ಕಳೆದುಕೊಂಡಿದ್ದು, ನಿರಾಶ್ರಿತರಾಗಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರನ್ನು ಸ್ಥಳಾಂತರಿಸಿದ್ದಾರೆ ವರದಿ ಮಾಡಿದೆ.

ADVERTISEMENT

ಲಾವೋಸ್‌ ನದಿಯ ಜಾಲ ವಿಶಾಲವಾಗಿ ಹರಡಿಕೊಂಡಿದ್ದು, ನದಿಗೆ ಹಲವು ಜಲಾಶಯಗಳನ್ನು ನಿರ್ಮಿಸಲಾಗುತ್ತಿದ್ದು, ಯೋಜನೆಗಳನ್ನು ರೂಪಿಸಲಾಗಿದೆ. ಇಲ್ಲಿ ಉತ್ಪಾದನೆಯಾದ ಹೆಚ್ಚಿನ ಜಲ ವಿದ್ಯುತ್‌ಅನ್ನು ಥೈಲೆಂಡ್‌ನಂತಹ ದೇಶಗಳಿಗೆ ಪೂರೈಕೆ ಮಾಡಲಾಗುತ್ತದೆ.

ವಿಶಾಲವಾಗಿ ಹರಡಿರುವ ಪ್ರವಾಹದ ನೀರಿನಲ್ಲಿ ಗ್ರಾಮಗಳು, ಅರಣ್ಯ ಮುಳುಗಡೆಯಾಗಿ ಮೇಲ್ಭಾಗ ಮಾತ್ರ ಕಾಣುವ ವೈಮಾನಿಕ ದೃಶ್ಯಗಳನ್ನು ಸ್ಥಳೀಯ ಎಬಿಸಿ ಸಂಸ್ಥೆ ಫೇಸ್‌ಬುಕ್‌ನಲ್ಲಿ ಪೋಸ್ಟರ್‌ಗಳನ್ನು ಹಾಕಿದೆ.

ನೀರಿನಲ್ಲಿ ಮುಳುಗಡೆಯಾಗಿರುವ ಮನೆಗಳ ಮೇಲೇರಿ ನಿಂತು ನೆರವಿಗಾಗಿ ಕಾಯುತ್ತಿರುವ ಜನರು ಹಾಗೂ ಸಮೀಪದ ಬುದ್ಧ ದೇಗುಲ ಬಹುತೇಕ ಮುಳುಗಡೆಯಾಗಿರುವ ದೃಶ್ಯಗಳು ಮತ್ತೊಂದು ವಿಡಿಯೊದಲ್ಲಿವೆ.

ಘಟನೆ ಸಂಭವಿಸಿದ 24 ಗಂಟೆಗಳ ಬಳಿಕವೂ ದುರಂತದ ವ್ಯಾಪ್ತಿಯನ್ನು ಅಂದಾಜು ಮಾಡಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

‘ಯಾವುದೇ ಸಾವು, ನೋವು ಸಂಭವಿಸಿರುವ ಅಥವಾ ಎಷ್ಟು ಜನ ಕಣ್ಮರೆಯಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ‘ ಎಂದು ಅಟಾಪ್ಯೂ ಪ್ರಾಂತ್ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಹೆಚ್ಚಿನ ಪ್ರವಾಹ ಉಂಟಾಗಿದೆ. ‍‍ಪ್ರವಾಹ ಉಂಟಾಗಿರುವ ಪ್ರದೇಶದಲ್ಲಿ ದೂರವಾಣಿ ಸಂಪರ್ಕಕ್ಕೆ ಸಿಗ್ನಲ್‌ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾಗಿ ಎಎಫ್‌ಪಿ ವರದಿ ಮಾಡಿದೆ.

ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಕಳುಹಿಸಲಾಗಿದೆ ಮತ್ತು ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರವಾಹದಿಂದ ಜಲಾವೃತ ಪ್ರದೇಶದ ವೈಮಾನಿಕ ದೃಶ್ಯ. ಚಿತ್ರ: ರಾಯಿಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.