ವಾಷಿಂಗ್ಟನ್: ಅಕ್ರಮ ಗನ್ ಖರೀದಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮಗ ಹಂಟರ್ ಬೈಡನ್ (54) ತಪ್ಪಿತಸ್ಥನೆಂದು ಡೆಲವೇರ್‌ನ ವಿಲ್ಮಿಂಗ್ಟನ್ ನ್ಯಾಯಾಲಯ ಘೋಷಿಸಿದೆ.
2018ರಲ್ಲಿ ಅಕ್ರಮವಾಗಿ ಗನ್ ಖರೀದಿ ಮತ್ತು ಮಾದಕ ವಸ್ತು ಸೇವಿಸಿದ ಸಂದರ್ಭದಲ್ಲಿ ಗನ್ ಇಟ್ಟುಕೊಂಡಿದ್ದ ಆರೋಪ ಹಂಟರ್ ಮೇಲಿತ್ತು. ಇದೀಗ ಈ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿವೆ. ಈ ಎರಡೂ ಆರೋಪಗಳು ಅಮೆರಿಕದ ಫೆಡರಲ್ ಕಾನೂನಿನ ಉಲ್ಲಂಘನೆಯಾಗಿವೆ.
ಸತತ ಏಳು ದಿನಗಳ ವಿಚಾರಣೆ ಬಳಿಕ ಹಂಟರ್ ಬೈಡನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದು ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ. ಗರಿಷ್ಠ 25 ವರ್ಷ ಜೈಲು ಶಿಕ್ಷೆ ಆಗಬಹುದು.
ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ಮಗ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವುದು ಇದೇ ಮೊದಲಾಗಿದೆ.
ತೀರ್ಪನ್ನು ಪ್ರಶ್ನಿಸಿ ಹಂಟರ್ ಬೈಡನ್ ಅವರು ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಅವರ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಹೋದರ ಬಿಯೊ ಸಾವಿನ ಬಳಿಕ ಮಾದಕ ವ್ಯಸನಿಯಾಗಿದ್ದ ಹಂಟರ್ ಇದೀಗ ಕ್ರಿಮಿನಲ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಬೈಡನ್ ಕುಟುಂಬಕ್ಕೆ ನೋವಿನ ಸಂಗತಿಯಲ್ಲದೇ ಬರಲಿರುವ ಅಧ್ಯಕ್ಷೀಯ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ ಎನ್ನಲಾಗಿದೆ.
ಹಂಟರ್ ಅಕ್ರಮ ಗನ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ ಅವನನ್ನು ಕ್ಷಮಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಹಿಂದೆ ಹೇಳಿದ್ದರು.
ವೃತ್ತಿಯಲ್ಲಿ ವಕೀಲರೂ ಆಗಿರುವ ಹಂಟರ್, ಉದ್ಯಮಿಯೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.