ವಾಷಿಂಗ್ಟನ್: ತಮ್ಮ ಜನಾಂಗೀಯ ಪರಂಪರೆ ಪ್ರಶ್ನಿಸಿದ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿರುಗೇಟು ನೀಡಿರುವ ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ನಾನು ಜಿಲ್ಲಾ ಅಟಾರ್ನಿ, ಅಟಾರ್ನಿ ಜನರಲ್ ಮತ್ತು ಕೋರ್ಟ್‌ರೂಮ್ ಪ್ರಾಸಿಕ್ಯೂಟರ್ ಆಗಿದ್ದಾಗ ‘ಎಲ್ಲ ರೀತಿಯ ದುಷ್ಕರ್ಮಿಗಳನ್ನು ನೋಡಿದ್ದೇನೆ’ ಮತ್ತು ಆ ರೀತಿಯ(ಡೊನಾಲ್ಡ್ ಟ್ರಂಪ್) ವ್ಯಕ್ತಿಗಳನ್ನು ನಿಭಾಯಿಸುತ್ತಲೇ ಬಂದಿದ್ದೇನೆ ಎಂದಿದ್ದಾರೆ.
‘ನಿಮ್ಮಲ್ಲಿ ಬಹಳ ಜನರಿಗೆ ತಿಳಿದಿದೆ. ನಾನು ಸೆನೆಟರ್ ಆಗಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ನಾನು ಚುನಾಯಿತ ಅಟಾರ್ನಿ ಜನರಲ್ ಮತ್ತು ಚುನಾಯಿತ ಜಿಲ್ಲಾ ಅಟಾರ್ನಿಯಾಗಿದ್ದೆ. ಅದಕ್ಕೂ ಮುನ್ನ, ಪ್ರಾಸಿಕ್ಯೂಟರ್ ಆಗಿದ್ದೆ’ ಎಂದು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
‘ಹಾಗಾಗಿ, ಆ ಎಲ್ಲ ಹುದ್ದೆಗಳನ್ನು ನಿರ್ವಹಿಸಿರುವ ನಾನು ಮಹಿಳೆಯರನ್ನು ನಿಂದಿಸುವ ಪರಭಕ್ಷಕರು, ವಂಚಕರು, ತಮ್ಮ ಲಾಭಕ್ಕಾಗಿ ನಿಯಮಗಳನ್ನು ಉಲ್ಲಂಘಿಸಿದವರು ಮುಂತಾದ ಎಲ್ಲ ರೀತಿಯ ದುಷ್ಕರ್ಮಿಗಳನ್ನು ನೋಡಿದ್ದೇನೆ. ನನಗೆ ಡೊನಾಲ್ಡ್ ಟ್ರಂಪ್ ಅವರಂತಹ ವ್ಯಕ್ತಿಗಳ ಬಗ್ಗೆ ತಿಳಿದಿದೆ. ನಾನು ಅವರಂತಹ ವ್ಯಕ್ತಿಗಳನ್ದು ನಿಭಾಯಿಸಿದ್ದೇನೆ’ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಅವರ ಜನಾಂಗೀಯ ಪರಂಪರೆಯನ್ನು ಪ್ರಶ್ನಿಸಿದ ಬಳಿಕ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ ಕಾವು ಪಡೆದುಕೊಂಡಿದೆ. ಭಾರತ ಮೂಲದವರಾದ ಆಕೆ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯ ಮಹಿಳೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
‘ಪರೋಕ್ಷವಾಗಿ ಅವರ(ಕಮಲಾ ಹ್ಯಾರಿಸ್) ಬಗ್ಗೆ ಬಲ್ಲೆ. ಅವರು ಯಾವಾಗಲೂ ತಮ್ಮನ್ನು ಭಾರತೀಯ ಮೂಲದವರೆಂದೇ ಗುರುತಿಸಿಕೊಳ್ಳುತ್ತಿದ್ದರು. ಆಕೆ ಕಪ್ಪುವರ್ಣೀಯ ಮಹಿಳೆ ಎಂದು ಹಲವು ವರ್ಷಗಳಿಂದ ನನಗೆ ಗೊತ್ತಿರಲಿಲ್ಲ. ಈಗ ಅವರು ಕಪ್ಪುವರ್ಣೀಯಳೆಂದು ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಹಾಗಾಗಿ, ಅವರು ಭಾರತೀಯರೋ? ಕಪ್ಪುವರ್ಣೀಯರೋ? ನನಗೆ ಗೊತ್ತಿಲ್ಲ ’ ಎಂದು ಷಿಕಾಗೊದಲ್ಲಿ ಕಪ್ಪುವರ್ಣೀಯ ಪತ್ರಿಕೋದ್ಯಮಿಗಳ ರಾಷ್ಟ್ರೀಯ ಸಂಘದ ಸಮ್ಮೇಳನದಲ್ಲಿ ಟ್ರಂಪ್ ಹೇಳಿದ್ದರು.
ಕಮಲಾ ಹ್ಯಾರಿಸ್ ತಾಯಿ ಭಾರತ ಮೂಲದವರಾಗಿದ್ದು, ತಂದೆ ಜಮೈಕಾದವರಾಗಿದ್ದಾರೆ.
ವಾಷಿಂಗ್ಟನ್‌ನಲ್ಲಿ ಕಪ್ಪುವರ್ಣೀಯರಿಗಾಗಿಯೇ ಇರುವ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಮಲಾ ಹ್ಯಾರಿಸ್ ವಿದ್ಯಾಭ್ಯಾಸ ಮಾಡಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಲಾ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಕಮಲಾ, ಕಪ್ಪುವರ್ಣೀಯ ಕಾನೂನು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯಾಗಿದ್ದರು.
ಈ ಬಗ್ಗೆ ಟ್ರಂಪ್ ಗಮನ ಸೆಳೆಯಲು ಯತ್ನಿಸಿದ ಪತ್ರಕರ್ತನೊಬ್ಬ, ಕಮಲಾ ಹ್ಯಾರಿಸ್ ಯಾವಾಗಲೂ ತಾವು ಕಪ್ಪುವರ್ಣೀಯರೆಂದೇ ಗುರುತಿಸಿಕೊಂಡಿದ್ದಾರೆ. ಐತಿಹಾಸಿಕವಾಗಿ ಕಪ್ಪುವರ್ಣೀಯರಿಗೆಂದೇ ಇರುವ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಹಾಗಿದ್ದರೆ ನಾನು ಅದನ್ನು ಗೌರವಿಸುತ್ತೇನೆ. ಆದರೆ, ಈ ಹಿಂದೆಲ್ಲ ಅವರು ಭಾರತದ ಮೂಲವನ್ನೇ ಒತ್ತಿ ಹೇಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯರೆಂದು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮಲ್ಲಿ ಯಾರಾದರೂ ಪರಿಶೀಲನೆ ಮಾಡಿ ಎಂದು ಟ್ರಂಪ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.