ADVERTISEMENT

ನನ್ನ ಆಡಳಿತ ಬೈಡನ್‌, ಟ್ರಂಪ್‌ ರೀತಿ ಇರುವುದಿಲ್ಲ: ಕಮಲಾ ಹ್ಯಾರಿಸ್‌

ಪಿಟಿಐ
Published 17 ಅಕ್ಟೋಬರ್ 2024, 23:30 IST
Last Updated 17 ಅಕ್ಟೋಬರ್ 2024, 23:30 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌: ‘ನನ್ನ ಆಡಳಿತವು ಬೈಡನ್‌ ರೀತಿಯಲ್ಲಾಗಲಿ, ಟ್ರಂಪ್‌ ರೀತಿಯಲ್ಲಾಗಲಿ ಇರುವುದಿಲ್ಲ. ನಾನು ನವ ಯುಗದ ನಾಯಕತ್ವವನ್ನು ಪ್ರತಿನಿಧಿಸುತ್ತೇನೆ. ಹೊಸ ಚಿಂತನೆ, ಆಲೋಚನೆಗಳ ಅಭಿವ್ಯಕ್ತಿಗೆ ತೆರೆದುಕೊಳ್ಳುತ್ತೇನೆ’ ಎಂದು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು ‘ಫಾಕ್ಸ್‌ ನ್ಯೂಸ್‌’ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ‘ಅಮೆರಿಕದ ಅಧ್ಯಕ್ಷರಾಗುವ ಎಲ್ಲ ಹೊಸಬರಂತೆ, ನಾನೂ ಕೂಡ ನನ್ನ ಜೀವನಾನುಭವಗಳನ್ನು, ನನ್ನ ವೃತ್ತಿಯ ಅನುಭವಗಳನ್ನು, ಹೊಸ ಆಲೋಚನೆಗಳನ್ನು ಆಡಳಿತದಲ್ಲಿ ಬಳಸಿಕೊಳ್ಳುತ್ತೇನೆ. ರಿಪಬ್ಲಿಕನ್‌ ಪಕ್ಷದವರು, ಉದ್ಯಮಿಗಳು ಅಥವಾ ಇತರ ಯಾರೇ ಆದರೂ ಅವರ ಅಭಿಪ್ರಾಯಗಳನ್ನು ನಾನು ಕೇಳುತ್ತೇನೆ’ ಎಂದಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ಟ್ರಂಪ್‌ ಅವರ ದ್ವೇಷ ಭಾಷಣದ ದೊಡ್ಡ ಭಾರವನ್ನು ನಾವು ಹೊತ್ತಿದ್ದೇವೆ. ಅಮೆರಿಕದ ಜನರನ್ನು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವ, ದೇಶವನ್ನು ಭಾಗ ಮಾಡುವ ರೀತಿಯಲ್ಲಿ ಟ್ರಂಪ್‌ ಅವರ ಭಾಷಣ ಇರುತ್ತದೆ. ಒಬ್ಬ ನಾಯಕ ಅಥವಾ ನಾಯಕತ್ವದ ಶಕ್ತಿಯು ಕಟ್ಟುವುದರಲ್ಲಿ ಇರುತ್ತದೆಯೇ ಹೊರತು ಕೆಡವುದರಲ್ಲಿ ಅಲ್ಲ’ ಎಂದು ಕಮಲಾ ಅಭಿಪ್ರಾಯಪಟ್ಟರು. 

ADVERTISEMENT

ಕಮಲಾಗೆ ಮತ ಹಾಕಬೇಕೆಂಬ ಆಸೆ: ಜಿಮ್ಮಿ ಕಾರ್ಟರ್‌

ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್‌ಗೆ ಈಗ 100 ವರ್ಷ. ಜಾರ್ಜಿಯಾದಲ್ಲಿ ಈಚೆಗೆ ನಡೆದ ನೋಂದಾಯಿತ ಹಿರಿಯ ನಾಗರಿಕರ ಮತದಾನ ಪ್ರಕ್ರಿಯೆಯಲ್ಲಿ ಸರತಿಯಲ್ಲಿ ನಿಂತು ಇ–ಮೇಲ್‌ ಮೂಲಕ ಮತದಾನ ಮಾಡಿದರು.

ಅ.1ರಂದು ಜಿಮ್ಮಿ ಅವರಿಗೆ ನೂರು ವರ್ಷ ತುಂಬಿತು. ವಯೋಸಹಜ ಸಮಸ್ಯೆಗಳ ಕಾರಣ ಅವರು ಹಾಸಿಗೆ ಹಿಡಿದಿದ್ದಾರೆ. ಸ್ಟ್ರೆಚರ್‌ನಲ್ಲಿಯೇ ಬಂದು ಮತಚಲಾಯಿಸಿದ್ದಾರೆ. ಈ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ನೂರು ವರ್ಷ ತುಂಬುವುದಕ್ಕೆ ಎರಡು ತಿಂಗಳ ಮುಂಚೆ ಅವರ ಮಗ ಚಿಪ್‌ ಕಾರ್ಟರ್‌ ಜಿಮ್ಮಿ ಅವರ ಬಳಿ ನೂರು ವರ್ಷ ಪೂರೈಸಬೇಕು ಎಂಬ ಆಸೆ ಇದೆಯೇ ಎಂದು ಕೇಳಿದ್ದರಂತೆ.

ಅದಕ್ಕೆ ಜಿಮ್ಮಿ ಅವರು ‘ಕಮಲಾ ಅವರಿಗೆ ಮತ ಹಾಕಬೇಕು ಎಂಬ ಆಸೆ ಇದೆ’ ಎಂದು ಉತ್ತರಿಸಿದ್ದರಂತೆ. ಈ ಬಗ್ಗೆ ಜಿಮ್ಮಿ ಅವರ ಮಗ ಚಿಪ್‌ ಕಾರ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.