ಲಂಡನ್: ದೇಶದ ಒಳಿತಿಗಾಗಿ ರಿಷಿ ಸುನಕ್ ಅವರಿಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ ಎಂದು ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಹೇಳಿದ್ದಾರೆ.
ಡೌನಿಂಗ್ ಸ್ಟ್ರೀಟ್‌ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್, ‘ನಾನು ಬ್ರಿಟನ್ ಮತ್ತು ಬ್ರಿಟಿಷ್ ಜನರ ಮೇಲೆ ನಂಬಿಕೆ ಇರಿಸಿದ್ದೇನೆ. ಪ್ರಕಾಶಮಾನವಾದ ದಿನಗಳು ಮುಂದೆ ಬರಲಿವೆ ಎಂದು ನನಗೆ ತಿಳಿದಿದೆ’ ಎಂದು ತಿಳಿಸಿದ್ದಾರೆ.
‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣಕಾರಿ ಧೋರಣೆ ವಿರುದ್ಧದ ಕೆಚ್ಚೆದೆಯ ಹೋರಾಟದಲ್ಲಿ ನಾವು ಉಕ್ರೇನ್ ಅನ್ನು ಬೆಂಬಲಿಸಬೇಕು. ಉಕ್ರೇನ್ ಮೇಲುಗೈ ಸಾಧಿಸಬೇಕು’ ಎಂದು ಟ್ರಸ್ ಕರೆ ನೀಡಿದ್ದಾರೆ.
‘ನಾವು ನಮ್ಮ ರಾಷ್ಟ್ರದ ರಕ್ಷಣೆಯನ್ನು ಬಲಪಡಿಸುವಿಕೆಯನ್ನು ನಿರಂತರವಾಗಿ ಮುಂದುವರಿಸಬೇಕು. ಅದನ್ನೇ ನಾನು ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ನಮ್ಮ ದೇಶದ ಒಳಿತಿಗಾಗಿ ರಿಷಿಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ’ ಟ್ರಸ್ ಹೇಳಿಕೊಂಡಿದ್ದಾರೆ.
ಬೋರಿಸ್ ಜಾನ್ಸನ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ನಾಯಕತ್ವಕ್ಕೆ ನಡೆದ ಸ್ಪರ್ಧೆಯಲ್ಲಿ ಲಿಜ್ ಟ್ರಸ್ ಎದುರು ರಿಷಿ ಸೋತಿದ್ದರು. ಆದರೆ, ಪ್ರಧಾನಿ ಹುದ್ದೆಗೇರಿದ 44 ದಿನಗಳಲ್ಲಿಯೇ ಟ್ರಸ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಪಕ್ಷದ ನಾಯಕ ಸ್ಥಾನ ಮತ್ತು ಪ್ರಧಾನಿ ಹುದ್ದೆಗೆ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಬೇಕಿತ್ತು. ಬೋರಿಸ್ ಜಾನ್ಸನ್ ಅವರ ಸಚಿವ ಸಂಪುಟದಲ್ಲಿ ರಿಷಿ ಅವರು ಹಣಕಾಸು ಸಚಿವರಾಗಿದ್ದರು. ರಿಷಿ ಅವರ ಬಂಡಾಯವೇ ಬೋರಿಸ್ ಅವರು ಹುದ್ದೆ ಕಳೆದುಕೊಳ್ಳುವುದಕ್ಕೂ ಕಾರಣವಾಗಿತ್ತು.
ಪಕ್ಷದ ನಾಯಕತ್ವ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ರಿಷಿ ಅವರಿಗೆ ನೂರು ಸಂಸದರ ಬೆಂಬಲ ಶುಕ್ರವಾರವೇ ದೊರೆತಿತ್ತು. ಈಗ ಅವರಿಗೆ ಸುಮಾರು 200 ಸಂಸದರ ಬೆಂಬಲ ಲಭಿಸಿದೆ. ಭಾರತವು ದೀಪಾವಳಿ ಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿಯೇ ರಿಷಿ ಅವರಿಗೆ ಮಹತ್ವದ ಹುದ್ದೆ ದೊರೆತಿದೆ.
ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಅವರು ರಿಷಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುನಕ್ ಅವರು ಮಂಗಳವಾರ ರಾಜ ಮೂರನೇ ಚಾರ್ಲ್ಸ್ ಅವರನ್ನು ಭೇಟಿ ಮಾಡಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸ್ಪರ್ಧೆಯಿಂದ ಸೋಮವಾರ ಹಿಂದಕ್ಕೆ ಸರಿದಾಗಲೇ ಪಕ್ಷದ ನಾಯಕತ್ವವು ರಿಷಿ ಅವರ ಕೈಸೇರುತ್ತದೆ ಎಂಬುದು ಬಹುತೇಕ ಖಚಿತವಾಗಿತ್ತು. ಆಗ ಪೆನಿ ಮಾರ್ಡಂಟ್ ಮಾತ್ರ ಸ್ಪರ್ಧೆಯಲ್ಲಿದ್ದರು. ನಾಮಪತ್ರಕ್ಕೆ ಅಗತ್ಯವಾಗಿದ್ದ ನೂರು ಸಂಸದರ ಬೆಂಬಲ ಪಡೆಯುವಲ್ಲಿ ಅವರು ವಿಫಲರಾದರು. ಹಾಗಾಗಿ, ಅವರು ಹಿಂದಕ್ಕೆ ಸರಿದರು. ಬಳಿಕ, ರಿಷಿ ಅವರ ಗೆಲುವನ್ನು ಘೋಷಿಸಲಾಯಿತು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.