ಟೋಕಿಯೊ: ಜಪಾನ್‌ನ ಫುಕುಶಿಮಾ ಡೈಚಿ (ಅಣು) ವಿದ್ಯುತ್ ಸ್ಥಾವರದ ಒಳಗೆ ಅಂತರ್ಜಲ ನೀರು ನುಗ್ಗುವುದನ್ನು ತಡೆಯಲೆಂದು ನಿರ್ಮಿಸಲಾಗಿದ್ದ ಮಂಜುಗಡ್ಡೆಯ ಗೋಡೆಯು ಭಾಗಶಃ ಕರಗಿಹೋಗಿರುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸುದ್ದಿ ಮಾಧ್ಯಮ ಎನ್‌ಎಚ್‌ಕೆ ಶುಕ್ರವಾರ ವರದಿ ಮಾಡಿದೆ.
ಫುಕುಶಿಮಾ ಅಣು ವಿದ್ಯುತ್ ಸ್ಥಾವರವನ್ನು ಟೋಕಿಯೊ ಎಲೆಕ್ಟ್ರಿಕ್ (ಟೆಪ್ಕೊ) ನಿರ್ವಹಣೆ ಮಾಡುತ್ತಿದೆ. ಡಿಸೆಂಬರ್‌ಗೂ ಮೊದಲೇ ಮಂಜುಗೊಡ್ಡೆಯ ಗೋಡೆಯನ್ನು ಮರು ನಿರ್ಮಾಣ ಮಾಡಲು ಟೆಪ್ಕೊ ಪ್ರಯತ್ನ ನಡೆಸುತ್ತಿದೆ. ಅಲ್ಲದೆ, ಎದುರಾಗಬಹುದಾದ ಸಮಸ್ಯೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
2011ರಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ವೇಳೆ ವಿದ್ಯುತ್ ಸ್ಥಾವರವನ್ನು ರಕ್ಷಿಸುವ ಭಾಗವಾಗಿ ಮತ್ತು ಅಂತರ್ಜಲ ಕಲುಷಿತಗೊಳ್ಳದಂತೆ ತಡೆಯುವ ಸುಲುವಾಗಿ ಮಂಜಿನ ಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಟೆಪ್ಕೊ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.