ADVERTISEMENT

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ; ವಿಗ್ರಹಗಳು ಧ್ವಂಸ

ಪಿಟಿಐ
Published 9 ಜೂನ್ 2022, 11:07 IST
Last Updated 9 ಜೂನ್ 2022, 11:07 IST
   

ಕರಾಚಿ: ಪಾಕಿಸ್ತಾನದ ಹಿಂದೂ ದೇವಾಲಯವೊಂದರಲ್ಲಿ ದೇವರ ವಿಗ್ರಹಗಳನ್ನು ಹಾಳು ಮಾಡಿರುವ ಘಟನೆ ಬುಧವಾರ ನಡೆದಿದೆ. ಅಲ್ಪಸಂಖ್ಯಾತ ಸಮುದಾಯಗಳ ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸುವುದು ಮುಂದುವರಿದಿದೆ.

ಕರಾಚಿಯ ಕೊರಾಂಗಿ ಪ್ರದೇಶದಲ್ಲಿರುವ 'ಮರಿ ಮಾತಾ ಮಂದಿರದ' ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ.

ಈ ಘಟನೆಯು ಕರಾಚಿಯಲ್ಲಿರುವ ಹಿಂದೂ ಸಮುದಾಯದವರಲ್ಲಿ ಆತಂಕ ಸೃಷ್ಟಿಸಿರುವುದಾಗಿ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ. ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ADVERTISEMENT

ಹಿಂದೂ ಸಮುದಾಯದ ಸ್ಥಳೀಯ ವ್ಯಕ್ತಿಯೊಬ್ಬರು ಘಟನೆಯ ಕುರಿತು ತಿಳಿಸಿದ್ದು, 'ತಡರಾತ್ರಿ ಮೋಟಾರ್‌ಸೈಕಲ್‌ಗಳಲ್ಲಿ ಬಂದ ಆರರಿಂದ ಎಂಟು ಜನರು ದೇವಸ್ಥಾನದ ಮೇಲೆ ದಾಳಿ ನಡೆಸಿದರು. ಆದರೆ, ಯಾರು ಮತ್ತು ಏಕೆ ದಾಳಿ ನಡೆಸಿದರು ಎಂಬುದು ತಿಳಿದಿಲ್ಲ' ಎಂದಿದ್ದಾರೆ.

ವಿಧ್ವಂಸಕ ಕೃತ್ಯ ನಡೆಸಿರುವ ಅನಾಮಿಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊರಾಂಗಿಯ ಪೊಲೀಸ್‌ ಅಧಿಕಾರಿ ಫಾರೂಕ್‌ ಸಂಜ್ರಾನಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ದೇವಸ್ಥಾನಗಳನ್ನು ಗುರಿಯಾಗಿಸಿ ಆಗಾಗ್ಗೆ ದಾಳಿ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಸಿಂಧು ನದಿ ತೀರದಲ್ಲಿನ ಐತಿಹಾಸಿಕ ದೇವಾಲಯದ ಮೇಲೆ ಅನಾಮಿಕ ವ್ಯಕ್ತಿಗಳು ದಾಳಿ ನಡೆಸಿ ಹಾಳುಗೆಡವಿರುವುದು ವರದಿಯಾಗಿತ್ತು.

ಅಧಿಕೃತ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ 75 ಲಕ್ಷ ಜನ ಹಿಂದೂಗಳಿದ್ದಾರೆ. ಹಿಂದೂ ಸಮುದಾಯದ ಪ್ರಕಾರ, ಸುಮಾರು 90 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಹಿಂದೂ ಸಮುದಾಯದ ಬಹುತೇಕರು ಸಿಂಧ್‌ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ತೀವ್ರವಾದಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿರುವ ಬಗ್ಗೆ ಆಗಾಗ್ಗೆ ದೂರುಗಳು ಕೇಳಿ ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.