ಮಿಲ್ವಾಕೀ/ವಾಷಿಂಗ್ಟನ್/ಬಟ್ಲರ್: ‘ದೇವರ ದಯೆ ಅಥವಾ ಅದೃಷ್ಟದಿಂದ ನಾನು ಬದುಕುಳಿದಿದ್ದೇನೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷ ಸ್ಥಾನದ ‘ರಿಪಬ್ಲಿಕನ್’ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಶನಿವಾರ ಸಂಜೆ ನಡೆದಿದ್ದ ಚುನಾವಣಾ ರ್‍ಯಾಲಿಯಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಟ್ರಂಪ್ ಅವರು ಘಟನೆಯ ಕುರಿತು ಭಾನುವಾರ ಮಾತನಾಡಿದ್ದಾರೆ.
ವಿಸ್ಕನ್‌ಸಿನ್ ರಾಜ್ಯದ ಮಿಲ್ವಾಕೀಯಲ್ಲಿ ಆರಂಭವಾಗಿರುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಸೋಮವಾರ ತೆರಳುತ್ತಿದ್ದ ಅವರು ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
‘ಪೆನ್ಸಿಲ್ವೇನಿಯಾದಲ್ಲಿ ಭಾಷಣ ಮಾಡುವಾಗ ನನ್ನ ತಲೆಯನ್ನು ಒಂದು ಕ್ಷಣ ತಿರುಗಿಸಿರದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ, ಬದಲಿಗೆ ಸತ್ತಿರುತ್ತಿದ್ದೆ. ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಷ್ಟು ತಲೆ ತಿರುಗಿದೆ. ಸ್ವಲ್ಪ ವ್ಯತ್ಯಾಸವಾಗಿದ್ದರೂ ಕಿವಿಗೆ ತಗುಲಿದ ಗುಂಡು, ನನ್ನನ್ನು ಕೊಲ್ಲಬಹುದಿತ್ತು’ ಎಂದು ಅವರು ವಿವರಿಸಿದ್ದಾರೆ.
‘ನಾನು ಸತ್ತೇ ಹೋದೆ ಎಂದು ಭಾವಿಸಲಾಗಿತ್ತು. ಆದರೆ, ದೇವರ ದಯೆ ಅಥವಾ ಅದೃಷ್ಟದಿಂದ ಬದುಕುಳಿದಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ದಾಳಿ ಬಳಿಕ ಮಾತನಾಡಲು ಬಯಸಿದ್ದೆ’:
‘ಗುಂಡಿನ ದಾಳಿಯ ಬಳಿಕ ನಾನು ಮಾತು ಮುಂದುವರಿಸಲು ಬಯಸಿದ್ದೆ. ಆದರೆ ಸೀಕ್ರೆಟ್ ಸರ್ವೀಸ್‌ನ ಸಿಬ್ಬಂದಿ ಆಸ್ಪತ್ರೆಗೆ ಹೋಗಬೇಕೆಂದು ಒತ್ತಾಯಿಸಿದರು’ ಎಂದು ಅವರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಟ್ರಂಪ್ ಅವರ ಬಲ ಕಿವಿಗೆ ಗಾಯವಾಗಿತ್ತು. ಘಟನೆಯಲ್ಲಿ ನಾಗರಿಕರೊಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಟ್ರಂಪ್ ಹತ್ಯೆಗೆ ಯತ್ನಿಸಿದ ಬಂದೂಕುಧಾರಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಹತ್ಯಗೈದಿದ್ದಾರೆ.
ಸಿಟಿ ಸ್ಕ್ಯಾನ್:
ಮುನ್ನೆಚ್ಚರಿಕೆ ಕ್ರಮವಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ‘ಸಿಟಿ ಸ್ಕ್ಯಾನ್’ ಪರೀಕ್ಷೆ ಮಾಡಲಾಗಿದ್ದು, ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ ಎಂದು ಸಿಎನ್‌ಎನ್ ವರದಿ ಮಾಡಿದೆ. ಇದಲ್ಲದೆ ಅವರಿಗೆ ಇತರ ಯಾವ್ಯಾವ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅದು ಹೇಳಿದೆ.
ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಇದು ರಾಜಕೀಯ ವೈಷಮ್ಯವನ್ನು ಶಮನಗೊಳಿಸುವ ಸಮಯ – ಜೋ ಬೈಡನ್ ಅಮೆರಿಕ ಅಧ್ಯಕ್ಷ
ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶಕ್ಕೆ ಬಿಗಿ ಭದ್ರತೆ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶ ಸೋಮವಾರ ಭಾರಿ ಭದ್ರತೆಯೊಂದಿಗೆ ಇಲ್ಲಿ ಆರಂಭಗೊಂಡಿತು. ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಹತ್ಯೆಯ ವಿಫಲ ಯತ್ನ ನಡೆದ ಬೆನ್ನಲ್ಲೇ ಮಿಲ್ವಾಕೀಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ನಾಮ ನಿರ್ದೇಶನವನ್ನು ಔಪಚಾರಿಕವಾಗಿ ಸಮಾವೇಶದಲ್ಲಿ ಸ್ವೀಕರಿಸುವ ಟ್ರಂಪ್ ಅವರು ಇದೇ 18ರಂದು ಮಿಲ್ವಾಕೀಯ ಫಿಸರ್ವ್ ಫೋರಂನಲ್ಲಿ ಭಾಷಣ ಮಾಡಲಿದ್ದಾರೆ. ಜುಲೈ 17ರಂದುಉ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ.
ಹಂತಕನ ಉದ್ದೇಶ ಇನ್ನೂ ನಿಗೂಢ
ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್‌ನ ಉದ್ದೇಶ ಏನಾಗಿತ್ತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆತ ಏಕಾಂಗಿಯಾಗಿಯೇ ಈ ಕೃತ್ಯ ಎಸಗಿದಂತೆ ಕಂಡು ಬರುತ್ತಿದೆ ಎಂದು ತನಿಖಾ ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಯು ಭಯೋತ್ಪಾದನೆಯ ಕೃತ್ಯ ಆಗಿರುವ ಸಾಧ್ಯತೆಯ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಫ್‌ಬಿಐ ತಿಳಿಸಿದೆ. ಹಂತಕನ ಉದ್ದೇಶ ಸ್ಪಷ್ಟವಾಗಿಲ್ಲ. ಆತ ಎಫ್‌ಬಿಐನ ನಿಗಾದಲ್ಲೂ ಇರಲಿಲ್ಲ. ಏಕಾಂಗಿಯಾಗಿ ಈ ಕೃತ್ಯ ನಡೆಸಿದಂತೆ ಕಾಣುತ್ತಿದೆ ಎಂದು ಹೇಳಿದ ಅವರು ತನಿಖಾಧಿಕಾರಿಗಳು ಕ್ರೂಕ್ಸ್‌ನ ಸಾಮಾಜಿಕ ಮಾಧ್ಯಮ ಜಾಲಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ. ‘ಹಂತಕನ ರಾಜಕೀಯ ಒಲವು ಸಹ ಸ್ಪಷ್ಟವಾಗಿಲ್ಲ. ಆತ ಪೆನ್ಸಿಲ್ವೇನಿಯಾದಲ್ಲಿ ರಿಪಬ್ಲಿಕನ್ ಮತದಾರ ಎಂದು ನೋಂದಾಯಿಸಿಕೊಂಡಿದ್ದಾನೆ. ಆದರೆ 2021ರ ಜನವರಿಯಲ್ಲಿ ಇದೇ ವಿಳಾಸ ನೀಡಿ ಡೆಮಾಕ್ರಟಿಕ್ ಪಕ್ಷಕ್ಕೆ ಸಂಬಂಧಿಸಿದ ಸಂಸ್ಥೆಯೊಂದಕ್ಕೆ 15 ಡಾಲರ್ ದೇಣಿಗೆ ನೀಡಿದ್ದಾನೆ’ ಎಂದು ಅವರು ಹೇಳಿದ್ದಾರೆ.
‘ಕುಟುಂಬದ ರಕ್ಷಣೆಗಾಗಿ ಜೀವ ತೆತ್ತ ಕೋರಿ’
ಪೆನ್ಸಿಲ್ವೇನಿಯಾದಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕೋರಿ ಕಾಂಪರೇಟೋರ್ ಎಂದು ಗುರುತಿಸಲಾಗಿದೆ. ಅವರು ಈ ಪ್ರದೇಶದ ಅಗ್ನಿಶಾಮಕ ದಳದ ಮಾಜಿ ಮುಖ್ಯಸ್ಥರಾಗಿದ್ದರು. ‘ಗುಂಡಿನ ದಾಳಿಯಿಂದ ತಮ್ಮ ಕುಟುಂವನ್ನು ರಕ್ಷಿಸುವ ವೇಳೆ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಅವರ ಪತ್ನಿ ತಿಳಿಸಿದ್ದಾರೆ’ ಎಂದು ಪೆನ್ಸಿಲ್ವೇನಿಯಾದ ಗವರ್ನರ್ ಜೋಶ್ ಶಪಿರೊ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಇದು ರಾಜಕೀಯ ವೈಷಮ್ಯವನ್ನು ಶಮನಗೊಳಿಸುವ ಸಮಯ–ಜೋ ಬೈಡನ್, ಅಮೆರಿಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.